ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಅವರನ್ನು ಸೋಲಿಸಲೇಬೇಕು ಎಂದು ಒಬ್ಬರಲ್ಲ, ಇಬ್ಬರಲ್ಲ ಐವರು ಕಾಂಗ್ರೆಸ್ ಮುಖಂಡರು ನನಗೆ ಟಿಕೆಟ್ ಕೊಡಿ, ನನಗೆ ಟಿಕೆಟ್ ಕೊಡಿ ಎಂದು ಪಕ್ಷದ ಟಿಕೆಟ್‍ಗಾಗಿ ಪೈಪೋಟಿಗೆ ಇಳಿದಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಸುಧಾಕರ್ ಅವರನ್ನು ಶತಾಗತಾಯ ಮಣಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಮುಖಂಡರು, ಈಗ ಟಿಕೆಟ್‍ಗಾಗಿ ಫೈಟ್ ಶುರು ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಕೈ ಕೊಟ್ಟು ಬಿಜೆಪಿಯ ಜೊತೆ ಇರುವ ಸುಧಾಕರ್ ಅವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಕಾಂಗ್ರೆಸ್ ಮುಖಂಡರಾದ ಜಿ.ಎಚ್ ನಾಗರಾಜ್, ಕೆ.ವಿ ನವೀನ್ ಕಿರಣ್, ಯಲವಳ್ಳಿ ನಾರಾಯಣಸ್ವಾಮಿ, ಅಂಜಿನಪ್ಪ, ಗಂಗರೆಕಾಲುವೆ ನಾರಾಯಣಸ್ವಾಮಿ ಸೇರಿದಂತೆ ಮಾಜಿ ಶಾಸಕ ಶಿವಾನಂದ್ ಸಹ ನಾನೂ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ.
ಒಗ್ಗಟ್ಟಾಗಿಯೇ ಎಲ್ಲರೂ ಜೊತೆಯಲ್ಲಿದ್ದರೂ ಬಹಿರಂಗವಾಗಿ ನಾನೂ ಆಕಾಂಕ್ಷಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಹೀಗಾಗಿ ಒಳಗೊಳಗೆ ತಮಗೆ ಟಿಕೆಟ್ ಕೊಡಿ ಎಂದು ಐವರು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆ ಆದರೂ ಕಾಂಗ್ರೆಸ್ಸಿನಲ್ಲಿ ಅಧಿಕೃತವಾಗಿ ಅಭ್ಯರ್ಥಿ ಆಯ್ಕೆ ಮಾಡಿ ಘೋಷಣೆ ಮಾಡುವುದಕ್ಕೆ ಹೈಕಮಾಂಡ್ ಹಿಂದೆ-ಮುಂದೆ ನೋಡುವಂತಾಗಿದೆ.
ಟಿಕೆಟ್‍ಗಾಗಿ ಕಾಂಗ್ರೆಸ್ ಮುಖಂಡರ ಫೈಟ್ ಎಲ್ಲೋ ಅನರ್ಹ ಶಾಸಕ ಸುಧಾಕರ್ ಗೆ ವರವಾಗುತ್ತಾ ಎನ್ನುವ ಲೆಕ್ಕಚಾರಗಳು ನಡೆಯತೊಡಗಿವೆ. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಅನರ್ಹ ಶಾಸಕ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ತಾವು ಕೂಡ ಆಕಾಂಕ್ಷಿಗಳಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸುಧಾಕರ್ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.