ಅಲೆಗಳ ಹೊಡೆತಕ್ಕೆ ಸಿಲುಕಿ ಮಾರ್ಗಮಧ್ಯಯೇ ಕೆಟ್ಟು ನಿಂತ ದೋಣಿಗಳು: ಮೂವರ ರಕ್ಷಣೆ!

Public TV
2 Min Read

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಮತ್ತೆರಡು ದೋಣಿಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದಾಗಿ ಸಮುದ್ರ ಮಧ್ಯೆಯೇ ಸಿಲುಕಿಕೊಂಡಿವೆ.

ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ಹನುಮ ಸಾನಿಧ್ಯ ಹೆಸರಿನ ದೋಣಿಯು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ ಸುಮಾರು 12 ನಾಟಿಕಲ್ ಮೈಲಿ ದೂರದಲ್ಲಿ ತಾಂತ್ರಿಕ ದೋಷದಿಂದಾಗಿ ದೋಣಿಯು ಅಲ್ಲೇ ನಿಂತುಕೊಂಡಿದೆ. ಸಮುದ್ರದಲ್ಲಿನ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ದೋಣಿಯು ಏಳು ಮೈಲಿ ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿದಿದೆ. ಈ ವೇಳೆ ದೋಣಿಯೊಳಗೆ ನೀರು ನುಗ್ಗಿ ನೋಡ ನೋಡುತ್ತಿದ್ದಂತೆ ಮುಳುಗುಡೆಯಾಗಿದೆ.

ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಭವ್ಯತ ಮತ್ತು ಲಕ್ಷ್ಮೀ ಪಂಡರಿ ಎಂಬ ಹೆಸರಿನ ದೋಣಿಯ ಮೀನುಗಾರರು ರಕ್ಷಿಸಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಯನ್ನು ಇತರೆ ದೋಣಿಗಳ ಸಹಾಯದಿಂದ ಹಗ್ಗ ಕಟ್ಟಿ ದಡಕ್ಕೆ ಎಳೆದು ತರಲಾಗಿದೆ. ಈ ಅವಘಡದಿಂದಾಗಿ ಸುಮಾರು 9 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೇ ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವಿಶ್ವಾಸ್ ಎಂಬ ದೋಣಿ ಸುರತ್ಕಲ್ ಸಮೀಪದ 35 ನಾಟಿಕಲ್ ಹಾಗೂ ಲಕ್ಷ್ಮೀ ಜನಾರ್ದನ್ ಎಂಬ ದೋಣಿಯು ಭಟ್ಕಳ ಸಮೀಪದ 40 ನಾಟಿಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆ ಯಿಂದ ಕೆಟ್ಟು ನಿಂತಿರುವ ಬಗ್ಗೆ ವರದಿಯಾಗಿದೆ. ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದೋಣಿಯವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ದೋಣಿಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟಿಕಲ್ (9.25 ಕಿ.ಮೀ) ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.

ಈಗಾಗಲೇ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿರುವ ದೋಣಿಗಳಲ್ಲಿರುವ ಮೀನುಗಾರರ ಸಂಪರ್ಕ ಮಾಡಿದ್ದು, ಕೆಟ್ಟು ನಿಂತಿರುವ ದೋಣಿಗಳಲ್ಲಿರುವ ಮೀನುಗಾರರನ್ನು ರಕ್ಷಿಸುವಂತೆ ಹೇಳಿದ್ದೇವೆ. ಅಲ್ಲದೇ ಸಮುದ್ರದಲ್ಲಿ ಸಾಕಷ್ಟು ಏರಿಳೀತ ಕಂಡುಬರುತ್ತಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಈಗಾಗಲೇ ಸೂಚನೆಯನ್ನು ನೀಡಲಾಗುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *