ರಾಯಚೂರಲ್ಲಿ ನೀರಿಲ್ಲದೇ ಮೀನು, ಮೊಸಳೆಗಳ ಮಾರಣಹೋಮ

Public TV
1 Min Read

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಈಗ ಹನಿ ನೀರಿಗೂ ಹಾಹಾಕಾರ ಎದ್ದಿದೆ. ಜಿಲ್ಲೆಯಲ್ಲಿ ಹರಿಯುತ್ತಿದ್ದ ಕೃಷ್ಣ ತುಂಗಭದ್ರೆ ಸಂಪೂರ್ಣ ಭತ್ತಿಹೋಗಿವೆ. ಹೀಗಾಗಿ ನದಿಯಲ್ಲಿ ಜೀವಿಸುತ್ತಿದ್ದ ಮೀನು, ಮೊಸಳೆ ಸೇರಿದಂತೆ ಜಲಚರಗಳ ಮಾರಣಹೋಮ ನಡೆದಿದೆ.

ಅಲ್ಲಲ್ಲಿ ಹೊಂಡಗಳು ನಿಮಾರ್ಣವಾಗಿದ್ದರೂ ಬಿಸಿಲಿನ ತಾಪಕ್ಕೆ ಮೀನು, ಮೊಸಳೆಗಳು ನೀರಿನಿಂದ ಹೊರಬಂದು ಸಾವನ್ನಪ್ಪುತ್ತಿವೆ. ಮೊಸಳೆಗಳು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು ಗ್ರಾಮಸ್ಥರು ಭಯದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸುತ್ತಿದ್ದಾರೆ.

ಮಾನ್ವಿ ತಾಲೂಕಿನ ರಾಜೊಳ್ಳಿ ಬಂಡಾದಲ್ಲಿ ಒಂದು ಮೊಸಳೆ ಸಾವನ್ನಪ್ಪಿದೆ. ರಾಯಚೂರು ತಾಲೂಕಿನ ಡಿರಾಂಪುರದಲ್ಲಿ ಎರಡು ಮೊಸಳೆಗಳು ಸಾವನ್ನಪ್ಪಿವೆ. ಕಳೆದ ಒಂದು ತಿಂಗಳಲ್ಲಿ ಒಟ್ಟು 10 ಸತ್ತ ಮೊಸಳೆಗಳು ಪತ್ತೆಯಾಗಿವೆ. ಕಳೆದ ವರ್ಷ ಗುಂಜಳ್ಳಿಯಲ್ಲಿ ಗ್ರಾಮಸ್ಥರು ವಿದ್ಯುತ್ ಶಾಕ್ ನೀಡಿ ಮೊಸಳೆ ಸಾಯಿಸಿದ್ದರು. ಕೃಷ್ಣ, ತುಂಗಾಭದ್ರಾ ನದಿತಟದ ಗ್ರಾಮಸ್ಥರಿಗೆ ಮೊಸಳೆಗಳದ್ದೇ ನಿತ್ಯ ಆತಂಕವಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಲಚರಗಳ ಮಾರಣಹೋಮ ನಡೆದಿದೆ. ಮೀನು, ಮೊಸಳೆಗಳ ರಕ್ಷಣೆಗೆ ನದಿಯಲ್ಲಿ ದೊಡ್ಡ ಹೊಂಡಗಳ ನಿರ್ಮಾಣ ಅಗತ್ಯವಿದೆ. ಈ ಬಗ್ಗೆ ಪ್ರಾಣಿಪ್ರಿಯರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕೃಷ್ಣಾನದಿಯಲ್ಲಿ ಉಳಿದ ನೀರನ್ನೇ ರಾಯಚೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದ್ರೆ ಜಲಚರಗಳು ಸತ್ತು ಗಬ್ಬುನಾರುತ್ತಿರುವ ನೀರನ್ನ ಕುಡಿದು ಜನ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಒಟ್ನಲ್ಲಿ, ಜಿಲ್ಲೆಗೆ ಎದುರಾಗಿರೋ ಬರಗಾಲ ಜನ, ಜಾನುವಾರು, ಜಲಚರಗಳನ್ನ ತಲ್ಲಣಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *