ಕಾರವಾರ: ಕರಾವಳಿ ಭಾಗದಲ್ಲಿ ಮತ್ಸ್ಯ ಕ್ಷಾಮ ಕಡಲ ಮಕ್ಕಳನ್ನು ಕಂಗೆಡಿಸುತ್ತಿದೆ. ಒಂದೆಡೆ ಕೊರೊನಾದಿಂದ ನಷ್ಟದ ಹಾದಿಯಲ್ಲಿದ್ದ ಮೀನುಗಾರಿಕೆ, ಹವಾಮಾನ ವೈಪರೀತ್ಯದಿಂದಾಗಿ ಇನ್ನಷ್ಟು ನೆಲ ಕಚ್ಚಿದೆ. ಮೀನುಗಾರಿಕೆ ನಂಬಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಲ್ಲಿ ಕೆಲ ಮಹಿಳೆಯರು ಸೇರಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮತ್ಸ್ಯ ಕ್ಷಾಮ ಕರಾವಳಿಯ ಕಡಲ ಮಕ್ಕಳ ಮೇಲೆ ಬರಸಿಡಿಲಿನಂತೆ ಬಡಿಯುತ್ತಿದೆ. ಒಂದೆಡೆ ಹವಾಮಾನ ವೈಪರೀತ್ಯ, ಇನ್ನೊಂದೆಡೆ ಹೆಚ್ಚುತ್ತಿರುವ ಡಿಸೇಲ್ ದರ ಮೀನುಗಾರರನ್ನು ಹಣ್ಣುಗಾಯಿ ನೀರುಗಾಯಿಯನ್ನಾಗಿ ಮಾಡಿದೆ. ಹೀಗಾಗಿ ಮೀನುಗಾರಿಕೆಯನ್ನು ನಂಬಿದ ಕುಟುಂಬಗಳು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಇದನ್ನೂ ಓದಿ: ಸೀರೆ ಧರಿಸಿ ಬರಲು ಹೋದವಳು ಪ್ರಿಯಕರನೊಂದಿಗೆ ಜೂಟ್
ಕಳೆದ ಕೆಲ ದಿನಗಳಿಂದ ಆಳ ಸಮುದ್ರಕ್ಕೆ ಮೀನು ಹಿಡಿಯಲು ಹೋದ ಮೀನುಗಾರರು ಬರಿಗೈಯಲ್ಲಿ ವಾಪಾಸಾಗುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ತಿಂಗಳುಗಟ್ಟಲೇ ದೋಣಿಗಳನ್ನು ಲಂಗರು ಹಾಕಿ ಇಡಬೇಕಾದ ಪರಿಸ್ಥಿತಿಯಿದೆ. ಹಿಂದೆ ನದಿ ಪ್ರದೇಶಗಳಲ್ಲಿ ಹೇರಳವಾಗಿ ಸಿಗುತ್ತಿರುವ ಕಪ್ಪೆಚಿಪ್ಪು, ನೀಲಿಕಲ್ಲುಗಳನ್ನು ಆರಿಸಿ ಮಾರಾಟ ಮಾಡಿ ಉಪಜೀವನ ನಡೆಸುತ್ತಿದ್ದರು. ಆದರೆ ಈಗ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಅವುಗಳು ಕೂಡ ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮೀನುಗಾರರಿಗೆ ಹೊಸ ಯೋಜನೆ ಜಾರಿಗೊಳಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾ ನಾಗನಾಥವಾಡದ ಮೀನುಗಾರಿಕಾ ಮಹಿಳೆಯರು, ಕೇಂದ್ರ ಮತ್ಸ್ಯ ಸಂಪದ ಯೋಜನೆಯಲ್ಲಿ ನೀಲಿಕಲ್ಲು ಕೃಷಿಯನ್ನು ಪ್ರಾರಂಭಿಸಿದ್ದಾರೆ.
ಎಲ್ಲೆಡೆ ಭಾರೀ ಬೇಡಿಕೆ ಇರುವ ಈ ನೀಲಿಕಲ್ಲು ಕೃಷಿಗೆ ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಮಾಡಲಾಗುತ್ತಿದೆ. ಮಹಿಳೆಯರು ಒಂದುಗೂಡಿ ಮಾಡುವ ಈ ಕೃಷಿಗೆ ಶೇ. 60 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಕಾರವಾರದ ಕಾಳಿನದಿಯಲ್ಲಿ ರಾಫ್ಟ್ ವಿಧಾನ ಅನುಸರಿಸಿ ಕೃಷಿ ಮಾಡಲಾಗುತ್ತದೆ. ಒಟ್ಟು 10 ರಾಫ್ಟ್‌ಗಳನ್ನು ಸಿದ್ದಪಡಿಸಿರುವ ಮೀನುಗಾರರು, ನೀಲಿ ಕಲ್ಲುಗಳನ್ನು ಉದ್ದದ ಬಟ್ಟೆಯಲ್ಲಿ ಜೋಡಿಸಿ ಪ್ಯಾಕ್ ಮಾಡಿ ಹಗ್ಗದೊಂದಿಗೆ ನೀರಿನಲ್ಲಿ ಇಳಿಬಿಟ್ಟಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ನೀಲಿಕಲ್ಲುಗಳು ಬೆಳೆಯುತ್ತವೆ. ಈ ಸಂಬಂಧ ಮಹಿಳೆಯರು ಮೀನುಗಾರಿಕಾ ಇಲಾಖೆಯಿಂದ ತರಬೇತಿ ಪಡೆದುಕೊಂಡಿದ್ದಾರೆ. ಮತ್ಸ್ಯ ಕ್ಷಾಮ ಸನ್ನಿವೇಶದ ಪರಿಸ್ಥಿತಿಯಲ್ಲಿ ಈ ಕೃಷಿ ಕಾರ್ಯ ಕೈ ಹಿಡಿದರೇ, ಮುಂದೆ ಕರಾವಳಿಯಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಇಂಥ ಪರ್ಯಾಯ ಕಸುಬು ಮಾಡಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಇದೊಂದು ಹೊಸ ಪ್ರಯತ್ನವಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ. ಪಿ. ನಾಗರಾಜು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಸಜ್ಜು – ಜನತಾ ಸಂಗಮದಲ್ಲಿ ಮುಖಂಡರೊಂದಿಗೆ ಹೆಚ್‍ಡಿಕೆ ಸಮಾಲೋಚನೆ
ನೀಲಿ ಕಲ್ಲುಗಳು ಉತ್ತಮ ಪೌಷ್ಟಿಕಾಂಶವನ್ನು ಹೊಂದಿದ್ದು ಬಲು ರುಚಿಕರ ಆಹಾರವಾಗಿದೆ. ಕರ್ನಾಟಕ ಮತ್ತು ಗೋವಾ ಕರಾವಳಿಯ ಭಾಗದಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ಹೀಗಾಗಿ ನಷ್ಟದಲ್ಲಿ ಇರುವ ಮೀನುಗಾರರ ಕುಟುಂಬಗಳಿಗೆ ಆಸರೆಯಾದಂತಾಗಿದೆ ಎನ್ನಲಾಗಿದೆ.