ಮಂಗಳೂರಿನ ದೈವಸ್ಥಾನದಲ್ಲಿ ನಡೆಯುತ್ತೆ ಮೀನು ಜಾತ್ರೆ!

Public TV
2 Min Read

ಮಂಗಳೂರು: ನಗರದಲ್ಲಿರೋ ದೈವಸ್ಥಾನವೊಂದರ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಿದ್ದರು. ಆದರೆ ಅವರೆಲ್ಲ ಮೀನುಗಾರರು ಅಲ್ಲ. ಬದಲಾಗಿ ಅವರೆಲ್ಲ ಆ ದೈವಸ್ಥಾನದ ದೈವ ಭಕ್ತರು.

ಹೌದು. ಮಂಗಳೂರಿನ ಚೇಳ್ಯಾರು ಶ್ರೀ ಧರ್ಮರಸು ಉಳ್ಳಾಲ ದೈವಸ್ಥಾನದ ಜಾತ್ರೆ ಆರಂಭಗೊಳ್ಳುವುದೇ ಭಕ್ತರು ಮೀನು ಹಿಡಿಯುವುದರೊಂದಿಗೆ.ತಾವು ಹಿಡಿದ ಮೀನನ್ನು ದೈವದ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಆ ಮೀನುಗಳನ್ನು ತಿಂದರೆ ರೋಗರುಜಿನಗಳು ಬರೋದಿಲ್ಲ ಅನ್ನುವ ನಂಬಿಕೆಯಂತೆ.

ಮೇ ತಿಂಗಳ ಸಂಕ್ರಮಣದಂದು ಮುಂಜಾನೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿ ಸಮೀಪ ಸೇರುತ್ತಾರೆ. ಈ ನದಿಗೆ ದೈವಸ್ಥಾನದ ಪ್ರಸಾದ ಹಾಕಿದ ನಂತರ ಸುಡುಮದ್ದು(ಪಟಾಕಿ)ಬಿಟ್ಟಾಗ ಎಲ್ಲರೂ ಒಟ್ಟಿಗೆ ನದಿಗಿಳಿಯುತ್ತಾರೆ. ಮಕ್ಕಳು ಮದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ. ತಾವೇ ತಂದಿರುವ ವಿವಿಧ ರೀತಿಯ ಬಲೆಗಳನ್ನು ಹಾಕಿ ಮೀನುಗಳನ್ನು ಹಿಡಿಯುತ್ತಾರೆ. ದೈವದ ಅನುಗ್ರಹದಿಂದ ಹೆಚ್ಚಿನ ಮೀನುಗಳು ಇರುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವ ಮೀನು ಸಿಗದೇ ಇರೋದಿಲ್ಲ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿಗಿಳಿಯೋದರಿಂದ ನೀರು ತಲ್ಲಣಗೊಂಡು ಎಲ್ಲೆಡೆ ಕೂತಿರುವ ಮೀನುಗಳೂ ಮೇಲಕ್ಕೆ ಬರುತ್ತದೆ.ನದಿಯ ಸುತ್ತಲೂ ಎಲ್ಲರು ಬಲೆ ಬೀಸುವುದರಿಂದಾಗಿ ಮೀನುಗಳು ಸುಲಭವಾಗಿ ಬಲೆಗೆ ಬೀಳುತ್ತವೆ. ಇಲ್ಲಿ ಯಾರೂ ಬೇಕಾದರೂ ತಮಗೆ ಬೇಕಾದಷ್ಟು ಮೀನುಗಳನ್ನು ಹಿಡಿಯಬಹುದು. ಹೀಗೆ ಸಿಕ್ಕಿದ ಮೀನಗಳನ್ನು ಭಕ್ತರು ಮನೆಗೆ ಕೊಂಡೊಯ್ದು ಪದಾರ್ಥ ಮಾಡಿ ದೈವ ಪ್ರಸಾದವಾಗಿ ಸ್ವೀಕರಿಸುತ್ತಾರೆ.

ಹಿಂದೆಲ್ಲ ಭಕ್ತರು ತಾವು ಹಿಡಿದ ಮೀನನ್ನು ಇತರರಿಗೆ ಹಂಚಿ ತಿನ್ನುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಮೀನು ಹಿಡಿದವರು ಮಾರಾಟ ಮಾಡುವ ಮೂಲಕ ಇತರ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಎಷ್ಟೇ ಹಣವಾದರೂ ಇಲ್ಲಿಗೆ ಬರುವ ಭಕ್ತರು ಭಕ್ತಿಯಿಂದ ಈ ಮೀನುಗಳನ್ನು ಖರೀದಿಸುತ್ತಾರೆ. ಮನೆಗೆ ಕೊಂಡೊಯ್ಯುದು ದೇವರ ಪ್ರಸಾದವಾದ ಮೀನಿನ ಭೋಜನ ಮಾಡುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ದೇವರು ಪ್ರಸನ್ನಗೊಳ್ಳುತ್ತಾರೆ. ಜೊತೆಗೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರೋದಿಲ್ಲ ಅನ್ನೋದು ಭಕ್ತರ ನಂಬಿಕೆ.

ಮುಂಜಾನೆಯಿಂದ ಮೀನಿನ ಬೇಟೆಯಲ್ಲಿರುವ ಭಕ್ತರು ಸೂರ್ಯ ನೆತ್ತಿ ಮೇಲೆ ಬಂದಾಗ ಬಲೆಗೆ ಬಿದ್ದ ಮೀನನ್ನೆಲ್ಲಾ ಹಿಡಿದುಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ದೈವದ ಪ್ರಸಾದವಾದ ಈ ಮೀನುಗಳನ್ನು ಪದಾರ್ಥ ಮಾಡಿ ಸತ್ತು ಸ್ವರ್ಗ ಸೇರಿದ ತಮ್ಮ ಹಿರಿಯರಿಗೆ ಮೊದಲು ಈ ಮೀನಿನ ಊಟವನ್ನು ಬಡಿಸಿ ನಂತರ ಮನೆ ಮಂದಿಯೆಲ್ಲೇ ಒಟ್ಟಿಗೆ ಪ್ರಸಾದದ ಮೀನಿನ ಊಟ ಮಾಡುತ್ತಾರೆ.

ತುಳುನಾಡಿನ ಗಾದೆ ಮಾತಿನಂತೆ `ಎರ್ಮಾಳು ಜಪ್ಪು ಕಂಡೇವು ಅಡೆಪು’ ಅಂದರೆ `ಎರ್ಮಾಳಿನಿಂದ ಜಾತ್ರೆಗಳು ಆರಂಭಗೊಂಡರೆ ಈ ಖಂಡಿಗೆ ಜಾತ್ರೆಯೊಂದಿಗೆ ತುಳುನಾಡಿನಲ್ಲಿ ಜಾತ್ರೆಗಳು ಕೊನೆಗೊಳ್ಳುತ್ತದೆ’. ಈ ಭಕ್ತಿಯ ಮೀನು ಹಿಡಿಯುವ ಜಾತ್ರೆಯೊಂದಿಗೆ ತುಳುನಾಡಿನ ಎಲ್ಲಾ ಜಾತ್ರೆಗಳಿಗೆ ತೆರೆ ಬೀಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *