ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

By
3 Min Read

ನವದೆಹಲಿ: ಇರಾನ್‌ನಲ್ಲಿ (Iran) ಸಿಲುಕಿದ್ದ ಕಾಶ್ಮೀರದ ವಿದ್ಯಾರ್ಥಿಗಳು (Jammu Kashmir) ದೆಹಲಿಯಲ್ಲಿ ಇಳಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇರಾನ್‌ನ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ 110 ವಿದ್ಯಾರ್ಥಿಗಳು ಆಪರೇಷನ್ ಸಿಂಧು (Operation Sindhu) ಕಾರ್ಯಾಚರಣೆಯ ಮೂಲಕ ಗುರುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದರು.

ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಆತ್ಮೀಯವಾಗಿ ಬರಮಾಡಿಕೊಂಡರು. ಸಂಘರ್ಷ ಪೀಡಿತ ಇರಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದರು.

ಈಗ ಈ ವಿದ್ಯಾರ್ಥಿಗಳು ಕಳಪೆ ಬಸ್ಸುಗಳನ್ನು ನೀಡಿದ್ದಕ್ಕೆ ಜಮ್ಮು ಕಾಶ್ಮೀರ ಸರ್ಕಾರವನ್ನು ದೂರಿದ್ದಾರೆ. ನಾವು ಬಹಳ ದೂರದಿಂದ ಬಂದಿದ್ದೇವೆ. ಆದರೆ ಸರ್ಕಾರ ಡಿಲಕ್ಸ್‌ ಬಸ್ಸು ನೀಡದೇ ಕಳಪೆ ಬಸ್ಸು ನೀಡಿದೆ. ವಿಮಾನ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

ನಾಲ್ಕು ದಿನದಿಂದ ಪ್ರಯಾಣ ಮಾಡಿ ಸಾಕಷ್ಟು ಸುಸ್ತಾಗಿದ್ದೇವೆ. ಈಗ ಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೋಗಿ ಅಂದರೆ ಹೇಗೆ? ಅಷ್ಟೇ ಅಲ್ಲದೇ ಇಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಯಾವೊಬ್ಬ ಅಧಿಕಾರಿಯನ್ನು ಸಹ ನಿಯೋಜನೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ ಜೊತೆಗಿನ ಸಂಘರ್ಷದ ಕಾರಣದಿಂದ ಇರಾನ್‌ ತನ್ನ ವಾಯುನೆಲೆಯನ್ನು ಬಂದ್‌ ಮಾಡಿದೆ. ಹೀಗಾಗಿ ಭಾರತದ ವಿದ್ಯಾರ್ಥಿಗಳು ಇರಾನ್‌ನಿಂದ ಅರ್ಮೇನಿಯಾ ಮತ್ತು ದೋಹಾ ಪ್ರವೇಶಿಸಿ ಇಂಡಿಗೋ ವಿಶೇಷ ವಿಮಾನದ ಮೂಲಕ ದೆಹಲಿಗೆ ಬಂದಿದ್ದಾರೆ. ಇದನ್ನೂ ಓದಿ: ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

ವಿದ್ಯಾರ್ಥಿಗಳ ಆಕ್ರೋಶದ ಬೆನ್ನಲ್ಲೇ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಡಿಲಕ್ಸ್‌ ಬಸ್ಸು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ ನೆಟ್ಟಿಗರು  ಕಿಡಿಕಾರುತ್ತಿದ್ದಾರೆ. ನಿಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದೆ ದೊಡ್ಡ ಸಾಧನೆ. ಭಾರತಕ್ಕೆ ಬಂದ ನಂತರವೂ ನಿಮಗೆ ಡಿಲಕ್ಸ್‌ ಬಸ್ಸು ಬೇಕು, ವಿಮಾನ ವ್ಯವಸ್ಥೆ ಮಾಡಬೇಕು ಎಂದು ಕೇಳುವುದು ಎಷ್ಟು ಸರಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

Share This Article