ಹದಿನೈದು ದಿನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ಘೋಷಣೆ

Public TV
1 Min Read

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಇಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಸಭೆ ನಡೆಸಲಾಯಿತು. ದೆಹಲಿಯ ಗ್ರೇಟರ್ ಕೈಲಾಶ್‍ನಲ್ಲಿ ಎರಡು ಗಂಟೆಗೂ ಅಧಿಕ ಕಾಲ ಚರ್ಚಿಸಲಾಗಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಮಂದಿರ ನಿರ್ಮಾಣಕ್ಕೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದಿಂದ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾಗಿರುವ ಹಿರಿಯ ವಕೀಲ ಕೆ.ಪರಸರನ್ ನೇತೃತ್ವದಲ್ಲಿ ಅವರದ್ದೇ ನಿವಾಸದಲ್ಲಿ ಸಭೆ ನಡೆಸಲಾಯಿತು. ಟ್ರಸ್ಟ್ ರಚನೆ ಬಳಿಕ ನಡೆದ ಮೊದಲ ಸಭೆಯಲ್ಲಿ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್, ಪ್ರಧಾನ ಕಾರ್ಯದರ್ಶಿಯಾಗಿ ಛಂಪತ್ ರೈ, ಖಜಾಂಚಿಯಾಗಿ ಗೋವಿಂದ್ ಗಿರಿ ಅವರನ್ನು ನೇಮಕ ಮಾಡಲಾಯಿತು. ಮೂಲಗಳ ಪ್ರಕಾರ ಮಂದಿರ ನಿರ್ಮಾಣ ಆರಂಭಕ್ಕೆ ದಿನಾಂಕ ಅಂತಿಮಗೊಳಿಸಿದ್ದು, ಅಯೋಧ್ಯೆಯಲ್ಲಿ ಮತ್ತೊಂದು ಸಭೆ ನಡೆಸಿದ ಬಳಿಕ ದಿನಾಂಕ ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ರಾಮ ಜನ್ಮಭೂಮಿಯಲ್ಲಿ ಸ್ಮಶಾನ ಇಲ್ಲ, ಅಲ್ಲೇ ಮಂದಿರ ಕಟ್ಟುತ್ತೇವೆ: ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಸಭೆಯ ಬಳಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷರಾದ ನೃತ್ಯ ಗೋಪಾಲ್ ದಾಸ್, ಜನರ ಭಾವನೆಯನ್ನು ಗೌರವಿಸಲಾಗುವುದು ಮತ್ತು ಆದಷ್ಟು ಬೇಗ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು, ರಾಮ ಮಂದಿರದ ಮುಖ್ಯ ಮಾದರಿ ಹಾಗೇ ಉಳಿಯಲಿದೆ. ಅಗಲ ಮತ್ತು ಎತ್ತರವನ್ನು ಹೆಚ್ಚಿಸಲು ಪ್ರಯತ್ನಗಳು ನಡೆದಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಛಂಪತ್ ರೈ ಮಾತನಾಡಿ, ದೇಣಿಗೆ ನೀಡುವವರಿಗಾಗಿ ಅಯೋಧ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರತಿನಿಧಿಗಳು, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಗಳು ಮತ್ತು ಅಯೋಧ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಹಾಗೂ ದಕ್ಷಿಣ ಭಾರತದಿಂದ ಏಕೈಕ ಟ್ರಸ್ಟ್ ಸದಸ್ಯರಾಗಿರುವ ಉಡುಪಿಯ ಶ್ರೀಕೃಷ್ಣ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *