ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ – ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

Public TV
2 Min Read

ಎಜ್ಬಾಸ್ಟನ್‌:  ಇಂಗ್ಲೆಂಡ್‌ ವಿರುದ್ಧ ನಡೆಯುವ 2ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಯುವನಾಯಕ ಶುಭಮನ್‌ ಗಿಲ್‌ (Shubman Gill) ಸ್ಮರಣೀಯ ದ್ವಿಶತಕ (Double century) ಸಿಡಿಸಿದ್ದಾರೆ. ಈ ಮೂಲಕ ಹಲವು ದಿಗ್ಗಜರ ದಾಖಲೆಗಳನ್ನ ನುಚ್ಚುನೂರು ಮಾಡಿದ್ದಾರೆ. ಸದ್ಯ ಆಂಗ್ಲರ ಬೆವರಿಳಿಸುತ್ತಿರುವ ಕ್ಯಾಪ್ಟನ್‌ ಗಿಲ್‌ 136 ಓವರ್‌ಗಳ ಅಂತ್ಯದ ವೇಳೆಗೆ 362 ಎಸೆತಗಳಲ್ಲಿ 256 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ.

ನಾಯಕನಾದ ಚೊಚ್ಚಲ ಟೆಸ್ಟ್‌ ಸರಣಿಯಲ್ಲೇ (Test Series) ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾವನ್ನ ಬೃಹತ್‌ ಮೊತ್ತದತ್ತ ಕೊಂಡೊಯ್ದಿದ್ದಾರೆ. ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ ಕಳೆದ 18 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಇಂಗ್ಲೆಂಡ್‌ ನೆಲದಲ್ಲಿ 500+ ರನ್‌ (ಇನ್ನಿಂಗ್ಸ್‌ವೊಂದರಲ್ಲಿ) ಗಳಿಸಿದೆ. ನಾಯಕ ಶುಭಮನ್ ಗಿಲ್‌ ಕೇವಲ ಮೂರೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ರನ್‌ ಪೂರೈಸಿದ್ದಾರೆ. ಇದರಿಂದಾಗಿ ಗಿಲ್‌, ಸುನಿಲ್ ಗವಾಸ್ಕರ್, ವಿರಾಟ್‌ ಕೊಹ್ಲಿ ಅವರಂತಹ ದಿಗ್ಗಜರ ದಾಖಲೆಗಳನ್ನ ನುಚ್ಚುನೂರು ಮಾಡಿದ್ದಾರೆ.

ಹೌದು. ಎಡ್ಜ್‌ಬಾಸ್ಟನ್​ನಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಇದೀಗ ಈ ದ್ವಿಶತಕದ ಜೊತೆಗೆ ಇಂಗ್ಲೆಂಡ್‌ ನೆಲದಲ್ಲಿ ಅದರಲ್ಲೂ ಟೆಸ್ಟ್ಟ್ ಪಂದ್ಯದ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತದ ಆಟಗಾರನೆಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 222 ರನ್ ಬಾರಿಸಿದ ಕೂಡಲೇ ಗಿಲ್, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೊದಲು ಗವಾಸ್ಕರ್ ಇನ್ನಿಂಗ್ಸ್​ವೊಂದರಲ್ಲಿ 221 ರನ್​ ಬಾರಿಸುವ ಮೂಲಕ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಆ ದಾಖಲೆ ಶುಭ್​ಮನ್ ಗಿಲ್ ಪಾಲಾಗಿದೆ.

ಮೊದಲ ಭಾರತೀಯ ಶುಭ್​ಮನ್ ಗಿಲ್
1979 ರಲ್ಲಿ ದಿ ಓವಲ್​ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್‌ವೊಂದರಲ್ಲೇ ಗವಾಸ್ಕರ್ 221 ರನ್​ ಕಲೆಹಾಕಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು. ಇದೀಗ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 222 ರನ್​ಗಳ ಗಡಿ ದಾಟಿರುವ ಗಿಲ್, ಗವಾಸ್ಕರ್ ಅವರ 46 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಇವರಿಬ್ಬರನ್ನು ಬಿಟ್ಟರೆ, ಮೂರನೇ ಸ್ಥಾನದಲ್ಲಿರುವ ಕನ್ನಡಿಗ ರಾಹುಲ್ ದ್ರಾವಿಡ್, 2002 ರಲ್ಲಿ ದಿ ಓವಲ್​ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 217 ರನ್ ಬಾರಿಸಿದ್ದರು. ಹಾಗೆಯೇ ಅದೇ ವರ್ಷ ಸಚಿನ್ ತೆಂಡೂಲ್ಕರ್ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ 193 ರನ್ ಬಾರಿಸಿದ್ದರು.

ಕೊಹ್ಲಿ ದಾಖಲೆ ಪುಡಿಪುಡಿ
ಇದು ಮಾತ್ರವಲ್ಲದೇ ತಮ್ಮ ಇನ್ನಿಂಗ್ಸ್‌ನಲ್ಲಿ 150 ರನ್ ಪೂರ್ಣಗೊಳಿಸಿದ ಕೂಡಲೇ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಅತಿದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ಆಟಗಾರ ಎನಿಸಿಕೊಂಡರು. ಈ ಮೂಲಕ ವಿರಾಟ್ ಕೊಹ್ಲಿ (Virat Kohli) ದಾಖಲೆ ಸಹ ಮುರಿದರು. 2018ರಲ್ಲಿ ರನ್‌ ಮಿಷಿನ್‌ ಕೊಹ್ಲಿ ಬರ್ಮಿಂಗ್ಹ್ಯಾಮ್ ಮೈದಾನದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ 149 ರನ್‌ ಬಾರಿಸಿದ್ದರು. ಇದೀಗ ಈ ಎಲ್ಲ ದಾಖಲೆಗಳನ್ನ ನುಚ್ಚುನೂರು ಮಾಡಿದ್ದಾರೆ.

ದಿಗ್ಗಜರ ಎಲೈಟ್‌ ಪಟ್ಟಿಗೆ ಗಿಲ್‌
250+ ರನ್‌ ಬಾರಿಸಿ ಆಂಗ್ಲರ ಬೆವರಿಳಿಸುತ್ತಿರುವ ಕ್ಯಾಪ್ಟನ್‌ ಗಿಲ್‌ ಸದ್ಯ 136 ಓವರ್‌ಗಳ ಅಂತ್ಯದ ವೇಳೆಗೆ 362 ಎಸೆತಗಳಲ್ಲಿ 256 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ. ಇದರೊಂದಿಗೆ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ ಬಳಿಕ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಗಿಲ್‌ ಪಾತ್ರರಾಗಿದ್ದಾರೆ.

Share This Article