WPL ಮೊದಲ ಶತಕ – ಸ್ಫೋಟಕ ಬ್ಯಾಟಿಂಗ್‌, ಇತಿಹಾಸ ಸೃಷ್ಟಿಸಿದ ಸಿವರ್ ಬ್ರಂಟ್

2 Min Read

ವಡೋದರಾ: ಡಬ್ಲ್ಯೂಪಿಎಲ್‌ (WPL) ಕ್ರಿಕೆಟ್‌ ಲೀಗ್‌ನಲ್ಲಿ ಚೊಚ್ಚಲ ಶತಕ ದಾಖಲಾಗಿದೆ. ಇಂಗ್ಲೆಂಡ್‌ ತಂಡದ ನಾಯಕಿ, ಮುಂಬೈ ಇಂಡಿಯನ್ಸ್‌ (MI) ಆಲ್‌ರೌಂಡರ್‌ ಸಿವರ್ ಬ್ರಂಟ್ (Nat Sciver-Brunt) ಡಬ್ಲ್ಯೂಪಿಎಲ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ.‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ಅಜೇಯ 100 ರನ್‌ (57 ಎಸೆತ, 16 ಬೌಂಡರಿ, 1 ಸಿಕ್ಸ್‌) ಹೊಡೆಯುವ ಮೂಲಕ ಸಿವರ್ ಬ್ರಂಟ್ ದಾಖಲೆ ಬರೆದಿದ್ದಾರೆ. ಮೂರನೇ ಓವರಿನಲ್ಲಿ ಕ್ರೀಸಿಗೆ ಆಗಮಿಸಿದ ಸಿವರ್‌ ಬ್ರಂಟ್‌ ಕೊನೆಯ ಓವರ್‌ನಲ್ಲಿ ಶತಕ ಹೊಡೆದರು.

ಗೆಲ್ಲಲೇ ಬೇಕಾದ ಇಂದಿನ ಪಂದ್ಯದಲ್ಲಿ 32 ಎಸೆತಗಳಲ್ಲಿ ಫಿಫ್ಟಿ ಹೊಡೆದ ಬ್ರಂಟ್‌ ನಂತರ 25 ಎಸೆತಗಳಲ್ಲಿ 50 ರನ್‌ ಹೊಡೆದರು. ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್‌ ಜೊತೆ 73 ಎಸೆತಗಳಲ್ಲಿ 131 ರನ್‌ ಜೊತೆಯಾಟವಾಡಿದ ಬ್ರಂಟ್‌ ನಾಲ್ಕನೇ ವಿಕೆಟಿಗೆ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಜೊತೆ 25 ಎಸೆತಗಳಲ್ಲಿ 42 ರನ್‌ ಜೊತೆಯಾಟವಾಡಿದರು.

ಹೇಲಿ ಮ್ಯಾಥ್ಯೂಸ್ 56 ರನ್‌(39 ಎಸೆತ, 9 ಬೌಂಡರಿ), ಪದ್ಮಶ್ರೀ ವಿಜೇತೆ ಹರ್ಮನ್‌ ಪ್ರೀತ್‌ ಕೌರ್‌ 20 ರನ್‌(12 ಎಸೆತ, 2 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರು. ಸಿವರ್ ಬ್ರಂಟ್ ಅವರ ಸ್ಫೋಟಕ ಶತಕದಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆದಿದೆ.

ಟಾಸ್‌ ಸೋತು ಫೀಲ್ಡಿಂಗ್‌ ಆಯ್ಕೆ ಮಾಡಿದ ಆರ್‌ಸಿಬಿಗೆ ಬೆಟ್ಟದಂತ ಸವಾಲಿದೆ. ಈಗಾಗಲೇ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಸಿದ್ದು ಇಂದಿನ ಪಂದ್ಯ ಗೆದ್ದರೆ ಫೈನಲ್‌ ಪ್ರವೇಶಿಸಲಿದೆ.

Share This Article