ಅಸಾರಾಂ ಬಾಪು ಜಾಮೀನು ಅರ್ಜಿ ತಿರಸ್ಕೃತ

Public TV
2 Min Read

ನವದೆಹಲಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾ.ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದು, ಮೊದಲು ಈ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದೆ. ಅಲ್ಲದೆ, ಗುಜರಾತ್‍ನ ಸ್ಥಳೀಯ ನ್ಯಾಯಾಲಯಕ್ಕೂ ಸಹ ಇದೇ ಸೂಚನೆ ನಿಡಿದ್ದು, ವಿಚಾರಣೆ ಪೂರ್ಣಗೊಳ್ಳುವ ವರೆಗೆ ಜಾಮೀನು ನೀಡದಂತೆ ಸೂಚಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದ್ವಿಸದಸ್ಯ ಪೀಠಕ್ಕೆ ಮಾಹಿತಿ ನೀಡಿ, ಪ್ರಕಣದ ಕುರಿತು ಇನ್ನೂ ವಿಚಾರಣೆ ನಡೆಯುತ್ತಿದ್ದು, 210 ಸಾಕ್ಷಿದಾರರನ್ನು ಪರೀಕ್ಷೆಗೊಳಪಡಿಸಬೇಕಿದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ವಿಚಾರಣೆ ಮುಂದುವರಿಸಿದೆ. ಅಸಾರಾಂ ಬಾಪು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವ ವೇಳೆ ಗುಜರಾತ್ ಹೈ ಕೋರ್ಟ್ ಈ ಕುರಿತು ಸ್ಪಷ್ಟಪಡಿಸಿತ್ತು. ಪ್ರಾಥಮಿಕ ಹಂತದ ವಿಚಾರಣೆ ನಡೆಯುತ್ತಿರುವ ವೇಳೆ ಪ್ರಭಾವಿತಗೊಂಡು ಜಾಮೀನು ನೀಡುವುದಿಲ್ಲ ಎಂದು ತಿಳಿಸಿತ್ತು.

ಸ್ವಯಂಘೋಷಿತ ದೇವ ಮಾನವ ಅಸಾರಾಂ ಬಾಪು 2013ರಿಂದಲೂ ಜೈಲು ವಾಸ ಅನುಭವಿಸುತ್ತಿದ್ದು, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸೇರಿದಂತೆ ಜೋಧ್‍ಪುರ್ ಪೊಲೀಸರು ಎರಡು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಅಸಾರಾಂ ಬಾಪು ಆರೋಪವನ್ನು ನಿರಾಕರಿಸಿದ್ದಾರೆ.

ಅಸಾರಾಂ ಬಾಪು 1971ರಲ್ಲಿ ಮಹಾತ್ಮ ಗಾಂಧಿ ಅವರ ಆಶ್ರಮಕ್ಕೆ ಹತ್ತಿರವಿರುವ ಸಬರಮತಿಯ ದಡದಲ್ಲಿ ಒಂದು ಸಣ್ಣ ಗುಡಿಸಲಲ್ಲಿ ಧಾರ್ಮಿಕ ಪ್ರವಚನ ಮಾಡಲು ಪ್ರಾರಂಭಿಸಿದ್ದರು. ಎರಡು ದಶಕಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಇದೀಗ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿ ನೂರಾರು ಆಶ್ರಮಗಳನ್ನು ನಿರ್ಮಿಸಿದ್ದಾರೆ.

ಕೇಸ್ ಹಿಸ್ಟರಿ:
2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‍ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‍ನಲ್ಲಿ ಅಸಾರಾಂನನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದಾರೆ. ಜೋಧಪುರ ನ್ಯಾಯಾಲಯಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಸಿ 2018ರ ಏಪ್ರಿಲ್ 25 ರಂದು ದೋಷಿ ಎಂದು ತೀರ್ಪು ನೀಡಿ ಜೀವವಾಧಿ ಶಿಕ್ಷೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *