ಶಿವಮೊಗ್ಗ: ನಟೋರಿಯಸ್ ರೌಡಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಹೋಗಿ ಗುಂಡೇಟು ತಿಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಸಮೀಪ ಹೊಳಲೂರು ಸಮೀಪ ಘಟನೆ ನಡೆದಿದ್ದು, ಸೊನಟಾ ಆಸೀಫ್ ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. ಕಳೆದ ವಾರ ಉದ್ಯಮಿಯೊಬ್ಬರ ಸಂಬಂಧಿಯ ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಸೀಫ್ ನನ್ನು ಶಿವಮೊಗ್ಗ ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್ ಮತ್ತು ತಂಡ ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದರು.
ಕಿಡ್ನಾಪ್ ಪ್ರಕರಣದ ಇನ್ನೊಬ್ಬ ಆರೋಪಿ ಅಸ್ಲಾಂ ಎಂಬಾತ ಹೊಳಲೂರಿನಲ್ಲಿ ಇರುತ್ತಾನೆ. ನಾನು ತೋರಿಸುತ್ತೇನೆ ಬನ್ನಿ ಎಂದು ಆಸೀಪ್ ತುಂಗಾ ನಗರ ಪೊಲೀಸರ ಜೊತೆ ಹೊಳಲೂರಿಗೆ ಹೋಗಿದ್ದ. ಹೀಗೆ ಹೋದಾಗ ಬಹಿರ್ದೆಸೆಯ ನೆಪದಲ್ಲಿ ಜೀಪಿಂದ ಇಳಿದವನು ಪೊಲೀಸರಿಗೆ ಹಲ್ಲೆ ಮಾಡಿ, ಕಲ್ಲು ತೂರಿ ಓಡಲು ಯತ್ನಿಸಿದ್ದನು.
ತುಂಗಾ ನಗರ ಠಾಣೆ ಎಸ್ ಐ ಗಿರೀಶ್ ಎಚ್ಚರಿಕೆ ನೀಡಿದರೂ ಕಿವಿಗೊಡದಾಗ ಪಿಸ್ತೂಲ್ ನಿಂದ ಆಸೀಫ್ ಕಾಲಿಗೆ ಶೂಟ್ ಮಾಡಿದ್ದಾರೆ. ಘಟನೆಯಲ್ಲಿ ತುಂಗಾನಗರ ಠಾಣೆ ಪೇದೆ ಮರ್ದಾನ್ ಹಾಗೂ ಎಸ್ ಐ ಗಿರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆಸೀಫ್ ಈಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.