ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

Public TV
5 Min Read

ಅನಂತ ಬ್ರಹ್ಮಾಂಡದಲ್ಲಿ ವಿಜ್ಞಾನ-ತಂತ್ರಜ್ಞಾನ ಲೋಕಕ್ಕೆ ನಿಲುಕದ ಅದೆಷ್ಟೋ ನಿಗೂಢತೆಗಳಿವೆ. ಭೂಮಿಯಲ್ಲಿ (Earth) ಇರುವಂತೆ ಅನ್ಯಗ್ರಹಗಳಲ್ಲೂ ಮಾನವನಿಗಿಂತ ಬುದ್ಧಿವಂತ ಜೀವಿಗಳು (Alien) ಇವೆಯೇ? ಇರುವುದಾದರೆ ಎಲ್ಲಿರುತ್ತವೆ? ಹೇಗಿರುತ್ತವೆ? ಈ ಪ್ರಶ್ನೆಗಳಿಗೆ ಕೆಲ ತಜ್ಞರು ಹೌದು ಎನ್ನುತ್ತಾರೆ. ಆದರೆ ಅನ್ಯಗ್ರಹ ಜೀವಿಗಳ ಅಸ್ತಿತ್ವ ಕುರಿತು ಬಲವಾದ ಸಾಕ್ಷ್ಯ ಇನ್ನೂ ಸಿಕ್ಕಿಲ್ಲ. ಆಕಾಶಕಾಯದಲ್ಲಿ ಹಾರಾಡುವ ವಸ್ತುಗಳು ಭೂಮ್ಯತೀತ ಜೀವಿಗಳ ವಾಹನಗಳೇ ಇರಬೇಕು ಎಂದು ಊಹೆಗಳಿವೆ. ಈ ಕುರಿತು ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ನಡುವೆ ನಾವು ಅನ್ಯಗ್ರಹ ಜೀವಿಗಳನ್ನು ನೋಡಿದ್ದೇವೆ. ತುಂಬಾ ವಿಚಿತ್ರವಾಗಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಅನ್ಯಗ್ರಹ ಜೀವಿಗಳ ಬಗ್ಗೆ ಅಂತೆ-ಕಂತೆಗಳ ಮಾತೇ ಹೆಚ್ಚು. ಇದರ ನಡುವೆ ಅಮೆರಿಕದ ವಿಜ್ಞಾನಿಯೊಬ್ಬರ (US Scientist) ಹೇಳಿಕೆ ಏಲಿಯನ್‌ಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

ಭೂಮಿಗೆ ಅಪ್ಪಳಿಸಿದ ‘ಬೆಂಕಿ ಚೆಂಡು’
ಅದು 2014, ಜನವರಿ 8 ರ ಸಂದರ್ಭ. ಬಾಹ್ಯಾಕಾಶದಿಂದ ಬೆಂಕಿಯ ಚೆಂಡು (Fireball) ಭೂಮಿಯ ಕಡೆ ನುಗ್ಗಿ ಬಂದು, ಪಪುವಾ ನ್ಯೂಗಿನಿಯಾದ ಈಶಾನ್ಯ ಕರಾವಳಿಯ ಮನುಸ್ ದ್ವೀಪದ ಉತ್ತರಕ್ಕೆ ಸಮುದ್ರದಲ್ಲಿ ಅಪ್ಪಳಿಸಿತು. ಅದು ನುಗ್ಗಿ ಬಂದ ಸ್ಥಾನ, ವೇಗ ಮತ್ತು ಹೊಳಪನ್ನು ಯುಎಸ್ ಸರ್ಕಾರದ ಸಂವೇದಕಗಳು ದಾಖಲಿಸಿವೆ. ಅದರ ಡೇಟಾವನ್ನ ಸತತ 5 ವರ್ಷಗಳ ಕಾಲ ಸರ್ಕಾರ ಗೌಪ್ಯವಾಗಿಟ್ಟಿತ್ತು. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೈದ್ಧಾಂತಿಕ ಖಗೋಳ ಭೌತಶಾಸ್ತ್ರಜ್ಞ ಅವಿ ಲೊಯೆಬ್ ಮತ್ತು ವಿದ್ಯಾರ್ಥಿಯಾಗಿದ್ದ ಅಮೀರ್ ಸಿರಾಜ್ 2019 ರಲ್ಲಿ ಈ ಬೆಂಕಿಯ ಚೆಂಡಿನ ಬಗ್ಗೆ (ಫೈರ್‌ಬಾಲ್) ವಿಜ್ಞಾನ ವಲಯದಲ್ಲಿ ಪ್ರಸ್ತಾಪಿಸುವವರೆಗೂ ಈ ವಿಚಾರವನ್ನು ಸೀಕ್ರೆಟ್ ಆಗಿಯೇ ಇಡಲಾಗಿತ್ತು. ಕಳೆದ ತಿಂಗಳು ಲೊಯೆಬ್, ಪಶ್ಚಿಮ ಪೆಸಿಫಿಕ್ ಸಮುದ್ರದ ತಳದಲ್ಲಿ ಹರಡಿಕೊಂಡಿದ್ದ ಬೆಂಕಿ ಚೆಂಡಿನ ತುಣುಕುಗಳನ್ನು ಪಡೆಯಲು ಸಾಕಷ್ಟು ಸರ್ಕಸ್ ನಡೆಸಬೇಕಾಯಿತು.

ಫೈರ್‌ಬಾಲ್‌ನಲ್ಲಿದ್ಯಾ ಏಲಿಯನ್‌ ಲೈಫ್‌ ಸೀಕ್ರೆಟ್‌?
ನಿಗೂಢತೆಗಳನ್ನ ಹೊತ್ತು ತಂದ ಫೈರ್‌ಬಾಲ್‌ನ ಒಂದಷ್ಟು ತುಣುಕುಗಳನ್ನ ತೆಗೆದುಕೊಂಡು ಲೊಯೆಬ್ ಸಂಶೋಧನೆಗೆ ಒಳಪಡಿಸಿದ್ರು. ‘ಏಲಿಯನ್ ಲೈಫ್ (ಅನ್ಯಗ್ರಹ ಜೀವಿಗಳ) ಬಗ್ಗೆ ಪುರಾವೆಗಳನ್ನ ಕಂಡುಕೊಳ್ಳೋದಕ್ಕೆ ಇದು ಮಾರ್ಗವಾಗಿರಬಹುದು’ ಎಂದು ವಿಜ್ಞಾನಿ ಘೋಷಿಸಿಯೇ ಬಿಟ್ರು. ಮುಂದುವರಿದು ‘ನಾವು ಸಿನಿಮಾಗಳಲ್ಲಿ ನೋಡಿದಂತೆ ಏಲಿಯನ್‌ಗಳು ಇರುವುದಿಲ್ಲ. ಕೃತಕ ಬುದ್ದಿಮತ್ತೆಗಳನ್ನು ಅನ್ಯಗ್ರಹ ಜೀವಿಗಳು ಹೋಲಬಹುದು’ ಅಂತ ಕೂಡ ಹೇಳಿದ್ದಾರೆ.

ಅನ್ಯಗ್ರಹ ತಂತ್ರಜ್ಞಾನದ ಅವಶೇಷ ಎಂದಿದ್ದ ವಿಜ್ಞಾನಿ
ಪೆಸಿಫಿಕ್‌ ಸಾಗರದ ತಳದಲ್ಲಿ ಸಿಕ್ಕಿರುವುದು ಅನ್ಯಲೋಕ ತಂತ್ರಜ್ಞಾನದ ಅವಶೇಷ ಇರಬಹುದು ಎಂದು ಈ ಹಿಂದೆ ಲೊಯೆಬ್‌ ಹೇಳಿಕೆ ಕೊಟ್ಟಿದ್ದರು. ಲೊಯೆಬ್‌ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾದವರು. ಕೆಲವೊಮ್ಮೆ ಇವರು ನೀಡುವ ಹೇಳಿಕೆಗಳು ಖಗೋಳ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

ಲೊಯೆಬ್‌ ಹೇಳಿಕೆಗೆ ವಿಜ್ಞಾನಿಗಳ ಆಕ್ಷೇಪ
ಖಗೋಳ ಭೌತಶಾಸ್ತ್ರಜ್ಞನ ಈ ಮಾತು ಕೆಲ ವಿಜ್ಞಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಲೊಯೆಬ್ ಆತುರದಲ್ಲಿ ಕೆಲ ಘೋಷಣೆಗಳನ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು, ವಿಜ್ಞಾನದ ಸಂಶೋಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ನಕಾರಾತ್ಮಕ ಭಾವನೆ ಸೃಷ್ಟಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದರು. ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಭೌತಶಾಸ್ತ್ರಜ್ಞ ಸ್ಟೀವ್ ಡೆಸ್ಚ್, ‘ಲೊಯೆಬ್ ಅವರ ಈ ಮಾತುಗಳನ್ನ ಕೇಳಿ ಜನ ಸುಸ್ತಾಗಿದ್ದಾರೆ. ಇದು ವಿಜ್ಞಾನವನ್ನು ಕಲುಷಿತಗೊಳಿಸುತ್ತಿದೆ’ ಅಂತ ಟೀಕಿಸಿದರು. ‘ಲೊಯೆಬ್ ಜೊತೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಇತರೆ ವಿಜ್ಞಾನಿಗಳು ನಿರಾಕರಿಸುತ್ತಿದ್ದಾರೆ’ ಅಂತ ಕೂಡ ಡೆಸ್ಚ್ ಹೇಳಿದ್ದರು.

ಕಪ್ಪು ಕುಳಿ, ಡಾರ್ಕ್ ಮ್ಯಾಟರ್, ಮೊದಲ ನಕ್ಷತ್ರ, ನಮ್ಮ ಬ್ರಹ್ಮಾಂಡದ ಭವಿಷ್ಯ ಕುರಿತು ಸಂಶೋಧನೆ ನಡೆಸಿ ನೂರಾರು ಅಧ್ಯಯನ ವರದಿಗಳನ್ನ ಪ್ರಕಟಿಸಿರುವ ವಿಜ್ಞಾನಿ ಲೊಯೆಬ್. ‘Oumuamua’ (ಅಂತರತಾರಾ ವಸ್ತು) ಸೌರವ್ಯೂಹದ ಮೂಲಕ ಹಾದು ಹೋಗುವಾಗ 2017ರಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಅದು ಕ್ಷುದ್ರಗ್ರಹವೋ ಅಥವಾ ಇನ್ನೊಂದು ನಕ್ಷತ್ರ ಸಿಸ್ಟಮ್‌ನಿಂದ ಬಂದ ಧೂಮಕೇತುವೋ ಅಂತ ವಿಜ್ಞಾನಿಗಳು ಚರ್ಚಿಸಿದ್ದರು. ಆಗ ಲೊಯೆಬ್ ‘ಇದು ಅನ್ಯಗ್ರಹ ಜೀವಿಗಳಿಗೆ ಸಂಬಂಧಿಸಿದ್ದಿರಬಹುದು’ ಎಂದಿದ್ದರು. ಅಲ್ಲಿಂದ ಲೊಯೆಬ್ ಅವರಿಗೆ ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲ ಮೂಡಿತ್ತು.

ಟೀಕೆಗಳಿಗೆ ಸೊಪ್ಪ ಹಾಕದೇ ಬೆಂಕಿಯ ಚೆಂಡಿನ ಕುರಿತು ಲೊಯೆಬ್ ಅಧ್ಯಯನ ನಡೆಸಲು ಶುರು ಮಾಡಿದರು. ನಾಸಾದ ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಇಲ್ಲಿ ಅಧ್ಯಯನ ಆರಂಭಿಸಿದರು. ಫೈರ್‌ಬಾಲ್‌ನ ದಿಕ್ಕು ಮತ್ತು ಪ್ರಭಾವದ ವೇಗದ ಕುರಿತು ಸಂಶೋಧನೆ ನಡೆಸಿದರು. ಅದು ಸೆಕೆಂಡಿಗೆ 28 ಮೈಲುಗಳಷ್ಟು ವೇಗವಾಗಿ ಚಲಿಸಿತ್ತು. ನಮ್ಮ ಸೂರ್ಯನ ಗುರುತ್ವಾಕರ್ಷಣೆಗೆ ಬಂಧಿತವಾಗಿ ಬೆಂಕಿಯ ಚೆಂಡು ತುಂಬಾ ವೇಗವಾಗಿ ಚಲಿಸಿರಬಹುದು ಎಂದು ಲೊಯೆಬ್ ಮತ್ತು ಸಿರಾಜ್ ಅಂದಾಜಿಸಿದರು. ‘Oumuamua’ ದಂತೆ ಇದು ಕೂಡ ಅಂತರತಾರಾ ವಸ್ತು ಆಗಿರಬೇಕು ಎಂದು ತೀರ್ಮಾನಿಸಿದರು. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ

ಕೊನೆಗೆ 2019 ರಲ್ಲಿ ತಮ್ಮ ಆವಿಷ್ಕಾರದ ಬಗ್ಗೆ ಒಂದು ವರದಿ ಬರೆದರು. ಆರಂಭದಲ್ಲಿ ಇದನ್ನು ದಿ ಆಸ್ಟ್ರೋಫಿಸಿಕಲ್ ಜರ್ನಲ್ ತಿರಸ್ಕರಿಸಿತು. ಯುಎಸ್ ಸ್ಪೇಸ್ ಕಮಾಂಡ್ ಟ್ಟಿಟ್ಟರ್‌ನಲ್ಲಿ, ಫೈರ್‌ಬಾಲ್‌ನ ವೇಗದ ಲೆಕ್ಕಾಚಾರ ಕುರಿತ ಪ್ರಕಟಣೆಯನ್ನು ಹಂಚಿಕೊಂಡಿತು. ಇದಕ್ಕೂ ಲೊಯೆಬ್ ಅವರ ಸಂಶೋಧನಾ ವರದಿಗೆ ಸಾಮ್ಯತೆ ಇರುವುದು ಗೊತ್ತಾಯಿತು. ಆಗ ಮೊದಲು ತಿರಸ್ಕರಿಸಿದ್ದ ಜರ್ನಲ್, ಈ ಸಂಶೋಧನಾ ವರದಿಯನ್ನು ನವೆಂಬರ್‌ನಲ್ಲಿ ಪ್ರಕಟಿಸಲು ಒಪ್ಪಿಗೆ ಸೂಚಿಸಿತು.

ಫೈರ್‌ಬಾಲ್‌ನಲ್ಲಿ ಏನಿದೆ?
ಲೊಯೆಬ್ ನಡೆಸಿದ ಆರಂಭಿಕ ಪರೀಕ್ಷೆಗಳು, ಫೈರ್‌ಬಾಲ್‌ನಲ್ಲಿ ಯುರೇನಿಯಂ ಮತ್ತು ಸೀಸ ಇರುವುದನ್ನು ಬಹಿರಂಗಪಡಿಸಿವೆ. ಇವುಗಳ ಸಮೃದ್ಧಿಯು ವಸ್ತುವಿನ ವಯಸ್ಸನ್ನು ಅಂದಾಜು ಮಾಡಲು ಸಹಕಾರಿಯಾಗಿದೆ. ನಮ್ಮ ಸೌರವ್ಯೂಹಕ್ಕೆ ಹೋಲಿಸಬಹುದಾದ ಕೆಲವು ಶತಕೋಟಿ ವರ್ಷಗಳ ವಯಸ್ಸನ್ನು ಹೊಂದಿದೆ ಎಂದು ಲೊಯೆಬ್ ಅಂದಾಜಿಸಿದ್ದಾರೆ.

ಫೈರ್‌ಬಾಲ್ ನಿಜವಾಗಿಯೂ ಮತ್ತೊಂದು ನೆರೆಯ ತಾರಾ ವಲಯದಿಂದ ಬಂದಿದ್ದರೂ ಸಹ, ಇದು ಅನ್ಯಗ್ರಹ ಜೀವಿಗಳಿಗೆ ಸಂಬಂಧಿಸಿವೆ ಎಂದು ತೋರಿಸಲು ಹೆಚ್ಚಿನ ಪುರಾವೆಗಳು ಬೇಕಾಗುತ್ತವೆ. ಏನೇ ಆಗಲಿ, ಇಂತಹ ಅಂತರತಾರಾ ವಸ್ತುಗಳು ವಿಶ್ವದ ಉಗಮ, ವಿಕಾಸದ ಚರಿತ್ರೆಯನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸುವಂತೆ ಮಾಡುತ್ತವೆ.

ಅಮೆರಿಕದ ಬಳಿ ಇದ್ಯಾ ಅನ್ಯಗ್ರಹ ಜೀವಿಗಳ ಮಾಹಿತಿ?
ಅಮೆರಿಕ ಸರ್ಕಾರದ ಬಳಿ ಅನ್ಯಗ್ರಹ ಜೀವಿಗಳ ಬಗ್ಗೆ ಮಾಹಿತಿ ಇದೆ. ಅಷ್ಟೇ ಅಲ್ಲ ಏಲಿಯನ್‌ಗಳ ನೌಕೆ ಕೂಡ ಇದೆ. ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವವರಿಂದ ನನಗೆ ಈ ವಿಷಯ ತಿಳಿದಿದೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್‌ ಗ್ರಷ್‌ ಈಚೆಗೆ ಸ್ಫೋಟಕ ಹೇಳಿಕೆ ನೀಡಿದ್ದರು. ಖಗೋಳ ಭೌತಶಾಸ್ತ್ರಜ್ಞ ಲೊಯೆಬ್‌ ಹಾಗೂ ಗ್ರಷ್‌ ಅವರ ಮಾತು ಏಲಿಯನ್‌ಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್