ವಿಶಾಖಪಟ್ಟಣ: ಟಾಟಾನಗರ-ಎರ್ನಾಕುಲಂ ಎಕ್ಸ್ಪ್ರೆಸ್ನ (Tatanagar-Ernakulam Express) ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ (Fire) ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ವಿಶಾಖಪಟ್ಟಣದಿಂದ 66 ಕಿ.ಮೀ ದೂರದದಲ್ಲಿರುವ ಎಲಮಂಚಿಲಿ (Yalamanchili) ನಿಲ್ದಾಣದ ಬಳಿ ನಸುಕಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ಎಲಮಂಚಿಲಿ ರೈಲು ನಿಲ್ದಾಣದ ಬಳಿ ರೈಲನ್ನು ನಿಲ್ಲಿಸಿದ್ದಾರೆ.
ಬಿ1 ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡು ಪಕ್ಕದ ಎಂ1 ಮತ್ತು ಬಿ2 ಬೋಗಿಗಳಿಗೆ ಹರಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಬೋಗಿಗಳನ್ನು ರೈಲಿನ ಉಳಿದ ಭಾಗಗಳಿಂದ ತಕ್ಷಣವೇ ಬೇರ್ಪಡಿಸಲಾಯಿತು.
Andhra News – One killed as two coaches of Tata-Ernakulam Express gutted in fire. pic.twitter.com/ABickq4JH1
— News Arena India (@NewsArenaIndia) December 29, 2025
ಬಿ1 ಬೆಂಕಿ ಹೊತ್ತಿಕೊಂಡ ಮೊದಲ ಬೋಗಿಯಾಗಿದ್ದರೂ ಎಂ1 ಮತ್ತು ಬಿ2 ಬೋಗಿಗಳಿಗೂ ತೀವ್ರ ಹಾನಿಯಾಗಿವೆ.
ಘಟನೆಯ ಸಮಯದಲ್ಲಿ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರದೃಷ್ಟವಶಾತ್ ಬಿ1 ಕೋಚ್ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದರು. ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ.
ಬೆಂಕಿ ಕಾಣಿಸಿಕೊಂಡಾಗ ರೈಲು ಜಾರ್ಖಂಡ್ನ ಟಾಟಾ ನಗರದಿಂದ ಕೇರಳದ ಎರ್ನಾಕುಲಂಗೆ ಪ್ರಯಾಣಿಸುತ್ತಿತ್ತು. ರೈಲ್ವೇ ಅಧಿಕಾರಿಗಳು ಬೆಂಕಿ ಹೊತ್ತಿಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

