ಕೊರೊನಾ ನಿರ್ಲಕ್ಷ್ಯ- ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್

Public TV
2 Min Read

ನವದೆಹಲಿ: ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ಲಂಡನ್‍ನಿಂದ ಭಾರತಕ್ಕೆ ವಾಸಪ್ ಆಗಿದ್ದ ಕನ್ನಿಕಾ ಅವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಶುಕ್ರವಾರ ಕನ್ನಿಕಾ ಅವರ ಕೋವಿಡ್-19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಇದಕ್ಕೂ ಮೊದಲು ಹಲವು ವಿಐಪಿಗಳನ್ನು ಕನ್ನಿಕಾ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕನ್ನಿಕಾ ಅವರಿ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಆದರೆ ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೋನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಹಜರತ್‍ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿಯೂ ಕನ್ನಿಕಾ ವಿರುದ್ಧ ಇನ್ನೂ ಎರಡು ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪ್ರದೇಶದ ಮೂರು ವಿಭಿನ್ನ ಪಾರ್ಟಿಗಳಲ್ಲಿ ಕನ್ನಿಕಾ ಮಾರ್ಚ್ 11ರಂದು ಲಂಡನ್‍ನಿಂದ ವಾಪಸ್ ಬಂದ ಬಳಿಕ ಭಾಗಿಯಾಗಿದ್ದರು. ಈ ಹಿನ್ನೆಲೆ ಇನ್ನೂ ಅವರ ಮೇಲೆ ಇನ್ನೂ ಎರಡು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾನಿಕಾ ಕಪೂರ್ ಬೇರೆ ಬೇರೆ ದಿನಗಳಲ್ಲಿ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಉನ್ನತ ರಾಜಕಾರಣಿಗಳು ಸೇರಿದಂತೆ ಹಲವಾರು ವಿಐಪಿಗಳನ್ನು ಭೇಟಿ ಮಾಡಿದ್ದರು. ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ ಅವರು ಕನ್ನಿಕಾರ ಸಂಪರ್ಕಕ್ಕೆ ಬಂದಿದ್ದರು. ಈ ಹಿನ್ನೆಲೆ ಈ ನಾಯಕರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ.

ಲಂಡನ್‍ನಿಂದ ಬಂದ ಬಳಿಕ ಕನ್ನಿಕಾ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು, ಅಲ್ಲದೇ ಕಾನ್ಪುರದ ಸಂಬಂಧಿಕರ ಮನೆಗೆ ಕನ್ನಿಕಾ ಭೇಟಿ ಕೊಟ್ಟಿದ್ದರು ಎಂದು ಲಕ್ನೋನ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.

ಜನವರಿ 30 ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.

24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5986, ಸ್ಪೇನ್‍ನಲ್ಲಿ 3494, ಜರ್ಮನಿಯಲ್ಲಿ 4528, ಅಮೆರಿಕದಕಲ್ಲಿ 5861, ಇರಾನ್‍ನಲ್ಲಿ 1237, ಫ್ರಾನ್ಸ್ ನಲ್ಲಿ 1617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *