ರಾಯಚೂರು: ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ನಿನ್ನೆ ವಾಲ್ಮಿಕಿ ಸಮುದಾಯದ ಮುಖಂಡರು, ಯುವಕರು ಜಿಲ್ಲೆಯ ಹಲವೆಡೆ ಪ್ರತಿಭಟನೆ ಮಾಡಿ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಲ್ಲಿ ರಾಯಚೂರು ಗ್ರಾಮೀಣ ಠಾಣೆಯಲ್ಲಿ ವಾಲ್ಮೀಕಿ ಸಮುದಾಯದ (Valmiki Community) ಕಾಶೀನಾಥ್ ಎಂಬುವವರು ದೂರು ದಾಖಲಿಸಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪ ಹಿನ್ನೆಲೆ ರಮೇಶ್ ಕತ್ತಿ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲು ಸಾಲು ದೂರು, ಜಾತಿನಿಂದನೆ ಪ್ರಕರಣ
ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದಬಳಕೆ ಮಾಡಿದ್ದ ರಮೇಶ್ ಕತ್ತಿಗೆ ಸಂಕಷ್ಟ ಎದುರಾಗಿದೆ. ವಾಲ್ಮೀಕಿ ಸಮಾಜದ ಮುಖಂಡರು ಸಾಲು ಸಾಲು ದೂರು ದಾಖಲಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲೂ ಅಟ್ರಾಸಿಟಿ ದಾಖಲಾಗಿತ್ತು. ನಿನ್ನೆ ಬಾಗಲಕೋಟೆಯ ಮುಧೋಳ, ದಾವಣಗೆರೆ, ಬಳ್ಳಾರಿಯಲ್ಲಿ ಜಾತಿನಿಂದನೆ ಕೇಸ್ಗಳು ದಾಖಲಾಗಿವೆ. ರಮೇಶ್ ಕತ್ತಿ ಅವಹೇಳನಕಾರಿ ಪದಬಳಕೆ ಖಂಡಿಸಿ ಇಂದು ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ಬಾಗಲಕೋಟೆಯ ಮುಧೋಳದಲ್ಲಿ ವೀರ ಸಿಂಧೂರ ಲಕ್ಷ್ಮಣ ಯುವಸೇನೆ ಪ್ರತಿಭಟನೆ ನಡೆಸಿ ಕತ್ತಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಕತ್ತಿ ಬಂಧನಕ್ಕೆ ಆಗ್ರಹಿಸಿ ಮುಧೋಳ ನಗರ ಠಾಣೆಯಲ್ಲಿ ಜಾತಿನಿಂದನೆ ಕೇಸ್ ದಾಖಲಿಸಿದ್ರು. ಇತ್ತ ಬೆಳಗಾವಿಯ ಗೋಕಾಕ್ ಪಟ್ಟಣದಲ್ಲಿ ಸಾವಿರಾರು ಜನ ಮಾನವ ಸರಪಳಿ ನಿರ್ಮಿಸಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯ್ತು. ರಮೇಶ್ ಕತ್ತಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಹಾವೇರಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ ನಡೀತು. ರಮೇಶ್ ಕತ್ತಿ ವಿರುದ್ಧ ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ಹೊರಹಾಕಿದ್ರು.

