ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ – ಬಿಜೆಪಿ ನಾಯಕನ ವಿರುದ್ಧ FIR

Public TV
2 Min Read

ಶ್ರೀನಗರ: ಕಾಶ್ಮೀರಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಎಂಎಲ್‍ಸಿ ವಿಕ್ರಮ್ ರಾಂಧವಾ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ವಿಕ್ರಮ್ ರಾಂಧವಾ ಅವರು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ವೈರಲ್ ಆದ ಬಳಿಕ ವಕೀಲ ಮುಜಾಫರ್ ಅಲಿ ಶಾ ಅವರ ಲಿಖಿತ ದೂರಿನ ಆಧಾರದ ಮೇಲೆ ಬಹು ಕೋಟೆ ಪೊಲೀಸ್ ಠಾಣೆಯಲ್ಲಿ ವಿಕ್ರಂ ರಾಂಧವಾ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಜಯಗಳಿಸಿದ ನಂತರ ಕಾಶ್ಮೀರದ ಹಲವು ಭಾಗಗಳಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಹೀಗಾಗಿ ಈ ಕುರಿತಂತೆ ವಿಕ್ರಮ್ ರಾಂಧವ ಅವರು ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅರೆಸ್ಟ್‌

ಇದೀಗ ವಿಕ್ರಮ್ ರಾಂಧವ ಅವರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕೇಡಿಗೆ ಕಾರಣವಾಗುವ ಹೇಳಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಬಿಜೆಪಿಯ ಜಮ್ಮು-ಕಾಶ್ಮೀರ ಘಟಕವು ವಿಕ್ರಮ್ ರಾಂಧವಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಈ ಕುರಿತಂತೆ ಪಕ್ಷದ ಮುಖ್ಯಸ್ಥ ರವೀಂದರ್ ರೈನಾ ಅವರು, ಎಲ್ಲಾ ನಂಬಿಕೆಗಳನ್ನು ಗೌರವಿಸುವ ಪಕ್ಷದ ಮೂಲ ತತ್ವಗಳಿಗೆ ವಿಕ್ರಮ್ ರಾಂಧವಾ ಅವರ ಹೇಳಿಕೆ ವಿರುದ್ಧವಾಗಿವೆ. ವೀಡಿಯೋ ಪಕ್ಷದ ಗಮನಕ್ಕೆ ಬಂದಿದ್ದು, ಅಂತಹ ಭಾಷೆಯನ್ನು ಸಹಿಸಲಾಗದ ಕಾರಣ ಶಿಸ್ತು ಸಮಿತಿಯು ತಕ್ಷಣವೇ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ವಿವಾದದ ಬಳಿಕ ಟ್ವಿಟ್ಟರ್, ಇನ್‍ಸ್ಟಾ ಡಿಲೀಟ್ ಮಾಡಿದ ರಾಜ್ ಕುಂದ್ರಾ

ಶೋಕಾಸ್ ನೋಟಿಸ್‍ನಲ್ಲಿ ವಿಕ್ರಮ್ ರಾಂಧವಾ ಅವರು ನೀಡಿರುವ ಹೇಳಿಕೆಗಳಿಗೆ 48 ಗಂಟೆಗಳ ಒಳಗೆ ವಿವರಣೆ ನೀಡುವಂತೆ ತಿಳಿಸಲಾಗಿದ್ದು, “ನೀವು ನಿರ್ದಿಷ್ಟ ಸಮುದಾಯದ ವಿರುದ್ಧ ಸಂಪೂರ್ಣ ಅಜಾಗರೂಕ ಮತ್ತು ದ್ವೇಷವನ್ನು ಉತ್ತೇಜಿಸುವ ಟೀಕೆಗಳನ್ನು ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಪಕ್ಷಕ್ಕೆ ಸ್ವೀಕಾರಾರ್ಹವಲ್ಲ. ಇದು ಪಕ್ಷಕ್ಕೆ ಅಪಖ್ಯಾತಿ ಮತ್ತು ಮುಜುಗರವನ್ನುಂಟು ಮಾಡಿದೆ” ಹೀಗಾಗಿ ವಿಕ್ರಮ್ ರಾಂಧವಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *