ಫೈನಲ್ ಆಯ್ತು ಖಾತೆ ಹಂಚಿಕೆ – ಕೊನೆಗೂ ಗೆದ್ದ ಸಿದ್ದರಾಮಯ್ಯ: ಯಾರಿಗೆ ಯಾವ ಖಾತೆ?

Public TV
1 Min Read

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಆಗಿದೆ.

ಖಾತೆ ಹಂಚಿಕೆ ವಿಚಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರಿಗೆ ಜಯ ಸಿಕ್ಕಿದೆ. ಅಲ್ಲದೇ ಹಾಲಿ ಗೃಹ ಸಚಿವ ಸ್ಥಾನ ಹೊಂದಿದ್ದ ಜಿ.ಪರಮೇಶ್ವರ್ ಅವರ ಖಾತೆ ಕೈತಪ್ಪಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!

ಯಾವೆಲ್ಲಾ ಖಾತೆ ಹಂಚಿಕೆಯಾಗಿದೆ?
ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಪಟ್ಟು ಹಿಡಿದಂತೆ ಗೃಹ ಖಾತೆಯನ್ನು ಪಡೆದಿದ್ದಾರೆ. ಇನ್ನೂ ಯಮಕನಮರಡಿ ಶಾಸಕರಾಗಿರುವ ಸತೀಶ್ ಜಾರಸಕಿಹೊಳಿ ಅಬಕಾರಿ ಖಾತೆಯನ್ನು ಬಿಟ್ಟು ಯಾವುದೇ ಖಾತೆಯನ್ನು ನೀಡಿದರೂ ನಿರ್ವಹಿಸುತ್ತೇನೆಂದು ಹೇಳಿಕೆ ನೀಡಿದ್ದರು. ಹೀಗಾಗಿ ಅವರಿಗೆ ಅರಣ್ಯ ಇಲಾಖೆಯ ಖಾತೆಯನ್ನು ನೀಡಲಾಗಿದೆ.

ಇದಲ್ಲದೇ ಶಾಸಕರಾದ ಸಿ.ಎಸ್.ಶಿವಳ್ಳಿಗೆ ಪೌರಾಡಳಿತ ಇಲಾಖೆ, ರಹೀಂ ಖಾನ್ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ, ಎಂ.ಟಿ.ಬಿ. ನಾಗರಾಜ್ ವಸತಿ ಇಲಾಖೆ, ತುಕಾರಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರ್.ಬಿ.ತಿಮ್ಮಾಪುರ ಕೌಶಾಲ್ಯಾಭಿವೃದ್ಧಿ ಇಲಾಖೆ ಹಾಗೂ ಪರಮೇಶ್ವರ್ ನಾಯಕ್ ಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆಯನ್ನು ನೀಡಲಾಗಿದೆ.

ಇಂಧನಕ್ಕೆ ಡಿಕೆಶಿ ಪಟ್ಟು?
ಮಾಹಿತಿಗಳ ಪ್ರಕಾರ ಡಿಕೆ ಶಿವಕುಮಾರ್ ಅವರು ಇಂಧನ ಖಾತೆ ಬೇಕೆಂದು ಪಟ್ಟು ಹಿಡಿದಿದ್ದು, ಅದಕ್ಕಾಗಿ ತಮ್ಮಲ್ಲಿರುವ ಎರಡೂ ಖಾತೆಗಳನ್ನು ಬಿಟ್ಟುಕೊಡಲು ಸಿದ್ದರಿದ್ದಾರೆ. ಅಲ್ಲದೇ ಈ ಬಗ್ಗೆ ಖುದ್ದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಇಂಧನ ಖಾತೆಯನ್ನು ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಇದೂವರೆಗೂ ಸಿಎಂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *