ಕೊನೆಗೂ ಬಿಎಸ್‍ವೈಗೆ ಲಕ್ಕಿ ಸರ್ಕಾರಿ ಬಂಗಲೆ ಬಿಟ್ಟು ಕೊಟ್ಟ ಸಾರಾ ಮಹೇಶ್

Public TV
3 Min Read

ಬೆಂಗಳೂರು: ಮಾಜಿ ಸಚಿವ ಸಾರಾ ಮಹೇಶ್ ಅವರು ಕೊನೆಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರಿ ಬಂಗಲೆಯನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನೂ 15 ದಿನ ಇರುವಾಗಲೇ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಂಬರ್ 2 ನಿವಾಸವನ್ನು ಮಾಜಿ ಸಚಿವರು ಖಾಲಿ ಮಾಡಿದ್ದಾರೆ. ಈ ಮೊದಲು ನಿವಾಸ ಬಿಟ್ಟು ಕೊಡುವಂತೆ ಸಿಎಂ ಬಿಎಸ್‍ವೈ ಅವರು ಅಧಿಕಾರಿಗಳ ಮೂಲಕ ಸಾರಾ ಮಹೇಶ್ ಗೆ ಸೂಚನೆ ನೀಡಿದ್ದರು. ಆದರೆ ಯಡಿಯೂರಪ್ಪ ಅವರ ಮಾತಿಗೆ ಸಾರಾ ಮಹೇಶ್ ಅವರು ಕ್ಯಾರೇ ಎಂದಿರಲಿಲ್ಲ.

ಬಿಎಸ್‍ವೈ ಮಾತಿಗೆ ಕಿವಿಗೊಡದೆ ಇಷ್ಟು ದಿನ ಮಹೇಶ್ ನಿವಾಸದಲ್ಲೇ ಇದ್ದರು. ಮೈತ್ರಿ ಸರ್ಕಾರ ಬಿದ್ದು, ಅಧಿಕಾರ ಹೋದರೂ ಆ ಮನೆ ಬಿಡದೆ ಇಷ್ಟು ದಿನ ಅಲ್ಲೇ ವಾಸ್ತವ್ಯವಿದ್ದರು. ಇದೀಗ ಸರ್ಕಾರ ಬಿದ್ದ 50 ದಿನಕ್ಕೆ ಮಾಜಿ ಸಚಿವರು ಮನೆ ಖಾಲಿ ಮಾಡಿದ್ದಾರೆ. ಈ ಬೆನ್ನಲ್ಲೇ ಸಿಎಂ ಅವರ ವಾಸ್ತವ್ಯಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಖಾಲಿ ಮಾಡಿದ ಒಂದೇ ದಿನಕ್ಕೆ ಸಿಬ್ಬಂದಿ ಮನೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಸರ್ಕಾರಿ ಬಂಗಲೆಯನ್ನು ನವೀಕರಣ ಮಾಡುವ ಕೆಲಸ ಆರಂಭಿಸಿದ್ದಾರೆ.

ಮನೆಯೊಳಗಿರುವ ಗೋಡೆಗಳನ್ನು ಸರಿ ಪಡಿಸುವುದು, ಗೋಡೆಗೆ ಮತ್ತೊಮ್ಮೆ ಪ್ಲಾಸ್ಟಿಂಗ್ ಮಾಡುವುದು, ಹಾಗೂ ಹೊಸದಾಗಿ ಗೋಡೆಗೆ ಪೇಂಟಿಂಗ್ ಮಾಡುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳ ಸೂಚನೆಯ ಮೇರೆಗೆ ಬಿಎಸ್‍ವೈ ಅವರ ಲಕ್ಕಿ ಹೌಸ್ ನ ನವೀಕರಣ ನಡೆಯುತ್ತಿದೆ.

ಲಕ್ಕಿ ಮನೆಗಾಗಿ ಬಿಎಸ್‍ವೈ ಪಟ್ಟು:
ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೂ ಬಿಎಸ್‍ವೈ ಅವರು ತಮ್ಮ ಹಳೆಯ ಈ ಲಕ್ಕಿ ಹೌಸನ್ನು ಬಿಟ್ಟಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಮಹಿಸಿಕೊಂಡರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೇ ತಮ್ಮ ಹಳೆಯ ರೇಸ್ ಕೋರ್ಸ್ ನಿವಾಸಕ್ಕೆ ಮರಳಲು ನಿರ್ಧರಿಸಿದ್ದರು. ಈ ಹಿಂದೆಯೂ ಸಿಎಂ ಆಗಿದ್ದಾಗ ಬಿಎಸ್‍ವೈ ಅವರು ಇದೇ ನಿವಾಸದಲ್ಲಿ ನೆಲೆಸಿದ್ದರು. ಅಲ್ಲದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿ ಇದ್ದಾಗ ಬಬಿಎಸ್‍ವೈ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನೂ ಏರಿದ್ದರು.

ಸಮ್ಮಿಶ್ರ ಸರ್ಕಾರ ಬಂದ ಸಮಯದಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ನನಗೆ ಇದೇ ಮನೆ ಬೇಕು ಎಂದು ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿ ಶಿವಾನಂದ ಸರ್ಕಲ್ ಬಳಿಯ ನಿವಾಸವನ್ನು ಬಿಎಸ್‍ವೈ ನೀಡಿದ್ದರು. ಆದರೆ, ಯಡಿಯೂರಪ್ಪ ಮಾತ್ರ ಶಿವಾನಂದ ಸರ್ಕಲ್ ಬಳಿ ನಿವಾಸಕ್ಕೆ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಾರಾ ಮಹೇಶ್ ನನಗೆ ರೇಸ್ ಕೋರ್ಸ್ ಮನೆಯೇ ಬೇಕು ಎಂದು ಹಠ ಹಿಡಿದು, ಅದೇ ಮನೆ ಪಡೆದಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದು, ಮಾಜಿ ಸಚಿವರಾಗಿದ್ದ ಸಾರಾ ಮಹೇಶ್ ಮನೆ ಖಾಲಿ ಮಾಡಲು ಸೂಚನೆ ನಿಡಿದ್ದರು. ಸದ್ಯ ಮಾಜಿ ಸಚಿವರು ಮುಖ್ಯಮಂತ್ರಿಗಳಿಗೆ ನಿವಾಸ ಬಿಟ್ಟುಕೊಟ್ಟಿದ್ದಾರೆ.

ಲಕ್ಕಿ ಮನೆ ಯಾಕೆ?
ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ ಎಂದು ಹೇಳಲಾಗುತ್ತಿದ್ದು, ಇನ್ನು ಮನೆಯ ವಾತಾವರಣವೂ ಸಹ ಉತ್ತಮವಾಗಿದೆ. ಹೀಗಾಗಿ ಬಹುತೇಕ ನಾಯಕರು ಇದೇ ಮನೆ ಬೇಕು ಎನ್ನುತ್ತಾರೆ ಎಂದು ತಿಳಿದು ಬಂದಿದೆ. ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಹೀಗಾಗಿ ಮತ್ತೆ ತಮ್ಮ ಅದೃಷ್ಟದ ಮನೆಗೆ ಹೋಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *