ಬಹುಮಹಡಿ ಕಟ್ಟಡ ಕುಸಿತ ಅಸಲಿ ಕಾರಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು

Public TV
1 Min Read

ಕೊಪ್ಪಳ: ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಬಹು ಅಂತಸ್ತಿನ ಕಟ್ಟಡ ಕುಸಿದಿತ್ತು. ಈಗ ಈ ಬಹುಮಹಡಿಯ ಕಟ್ಟಡ ಕುಸಿತದ ಹಿಂದಿನ ಅಸಲಿ ಕಾರಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಗಿದೆ.

ಕುಸಿದ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳನ್ನು ಬಳಸಲಾಗಿತ್ತು. ಹಾಗಾಗಿ ಕಟ್ಟಡ ಕುಸಿದು ಬಿದ್ದಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಕೆರೆಯ ಮಣ್ಣನ್ನು ತಂದು ಫಿಲ್ಟರ್ ಮಾಡುವ ದಂಧೆ ಬಯಲಾಗಿದೆ. ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಫಿಲ್ಟರ್ ದಂಧೆ ಸಾಗುತ್ತಿದೆ.

ಗಂಗಾವತಿ ತಾಲೂಕಿನ ಚಿಕಬೆಣಕಲ್ ಮತ್ತು ದೇವಗಾಟ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಮರಳು ಫಿಲ್ಟರ್ ಗಳು ನಡೆಯುತ್ತಿರುವುದು ತಿಳಿದು ಬಂದಿದೆ. ಮಣ್ಣನ್ನು ಫಿಲ್ಟರ್ ಮಾಡಿ ದೂರದ ಪ್ರದೇಶಗಳಿಗೆ ಮಾರಾಟ ಮಾಡುವ ಜಾಲ ಪತ್ತೆಯಾಗಿದ್ದು, ರಾತ್ರೋರಾತ್ರಿ ಟ್ರ್ಯಾಕ್ಟರ್, ಟಿಪ್ಪರ್ ಮೂಲಕ ಅಕ್ರಮ ಫಿಲ್ಟರ್ ಮರಳು ಮಾರಾಟ ಮಾಡಲಾಗುತ್ತಿದೆ.

ಗಂಗಾವತಿಯ ಫಿಲ್ಟರ್ ಮರಳು ಗದಗ, ಹುಬ್ಬಳ್ಳಿ, ಧಾರವಾಡಕ್ಕೂ ಸರಬರಾಜು ಆಗುತ್ತೆ. ಫಿಲ್ಟರ್ ಮರಳು ಬಹುಮಹಡಿ ಕಟ್ಟಡಕ್ಕೆ ಹಾನಿಕಾರಕವಾಗಿದ್ದು, ಬಹುತೇಕ ರಾಜ್ಯಾದ್ಯಂತ ಫಿಲ್ಟರ್ ಮರಳು ಉಪಯೋಗಿಸಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನವಾಗುತ್ತಿದೆ.

ಫಿಲ್ಟರ್ ಮರಳು ಉಪಯೋಗಿಸಿ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡ ಕಟ್ಟಿದರೂ ವ್ಯರ್ಥ. ಏಕೆಂದರೆ ಫಿಲ್ಟರ್ ಮರಳು ಉಪಯೋಗಿಸಿದರೆ ಯಾವಾಗ ಬೇಕಾದರೂ ಕಟ್ಟಡ ಕುಸಿಯಬಹುದು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮರಳು ಫಿಲ್ಟರ್ ದಂಧೆಗೆ ಬ್ರೇಕ್ ಹಾಕಬೇಕಿದೆ. ಫಿಲ್ಟರ್ ದಂಧೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಶಾಮೀಲು ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *