ಸ್ಟಂಟ್ ಡೈರೆಕ್ಟರ್ ರವಿ ವರ್ಮಾ ವಿರುದ್ಧ ದೂರು ದಾಖಲು

Public TV
1 Min Read

ನ್ನಡದ ಹೆಸರಾಂತ ಸಾಹಸ (Stunt) ನಿರ್ದೇಶಕ ರವಿ ವರ್ಮಾ (Ravi Verma) ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು (Complaint) ನೀಡಿದ್ದಾರೆ ಮತ್ತೋರ್ವ ಸಾಹಸ ನಿರ್ದೇಶಕ ಡ್ಯಾನಿ.

ಡ್ಯಾನಿ (Danny) ಮಾಸ್ಟರ್ ಮತ್ತು ರವಿ ವರ್ಮಾ ಮಾಸ್ಟರ್ ಜಗಳ ನಿನ್ನೆ ಮೊನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಮುಸುಕಿನ ಗುದ್ದಾಟ ಇದ್ದೇ ಇದೆ. ಅದು ಈಗ ಪೊಲೀಸ್ ಠಾಣೆ ಮೆಟ್ಟಿಲು ಏರುವ ಹಂತಕ್ಕೆ ತಲುಪಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಡ್ಯಾನಿ ಮಾಸ್ಟರ್, ತಮ್ಮ ಹೆಸರು ಹೇಳಿಕೊಂಡು ಪರಭಾಷಾ ಸಿನಿಮಾ ರಂಗದಲ್ಲಿ ರವಿ ವರ್ಮಾ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ರವಿ ವರ್ಮಾರನ್ನು ಕೆರಳಿಸಿತ್ತು.

ಜಾಕಿ ಸಿನಿಮಾದಲ್ಲಿ ಬೆಂಕಿಯಲ್ಲಿ ನಡೆಯುವಂತಹ ಫೈಟ್‍ ಇದೆ. ಅದನ್ನು ಕಂಪೋಸ್ ಮಾಡಿದ್ದು ಡ್ಯಾನಿ ಮಾಸ್ಟರ್. ಆದರೆ, ಅದು ತಾವು ಮಾಡಿದ್ದು ಎಂದು ಪ್ರಭುದೇವ ಅವರ ಬಳಿ ರವಿ ವರ್ಮಾ ಹೇಳಿ ಚಾನ್ಸ್ ಗಿಟ್ಟಿಸಿಕೊಂಡಿದ್ದರು ಎಂದೆಲ್ಲ ಡ್ಯಾನಿ ಆರೋಪ ಮಾಡಿದ್ದರು. ಈ ಕಾರಣಕ್ಕಾಗಿ ರವಿ ವರ್ಮಾ ಅವರು ಜೀವ ಬೆದರಿಕೆ ಹಾಕಿದ್ದಾರೆ ಎನ್ನುವುದು ಡ್ಯಾನಿ ಆರೋಪ.

 

ಈ ಕುರಿತಾಗಿ ಮಾತನಾಡಲು ಡ್ಯಾನಿ ಅವರಿಗೆ ರವಿ ವರ್ಮಾ  ಕರೆ ಮಾಡಿದ್ದರಂತೆ. ಅನಾರೋಗ್ಯದ ಕಾರಣದಿಂದಾಗಿ ಮಾತನಾಡಲು ಆಗಿರಲಿಲ್ಲ. ಅಷ್ಟರಲ್ಲಿ ಕೆರಳಿದ್ದ ರವಿ ವರ್ಮಾ ತಮಗೆ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಡ್ಯಾನಿ ಆರೋಪ ಮಾಡಿದ್ದಾರೆ.

Share This Article