ಗಂಡಸ್ರು, ಹೆಂಗಸ್ರು ಅನ್ನಲಿಲ್ಲ, ಹೊಡೆದಾಡಿದ್ದೇ ಹೊಡೆದಾಡಿದ್ದು – ದಾವಣಗೆರೆಯಲ್ಲಿ ಲ್ಯಾಂಡ್‍ಗಾಗಿ ವಾರ್

Public TV
1 Min Read

ದಾವಣಗೆರೆ : ಗೋಮಾಳ ಜಮೀನಿಗಾಗಿ ಎರಡು ಕುಟುಂಬಗಳ ಮಾರಾಮಾರಿ ನಡೆದಿದ್ದು, ಹೆಂಗಸರು, ಗಂಡಸರು ಎನ್ನದೇ ಹೊಡೆದಾಡಿಕೊಂಡ ಘಟನೆ ದಾವಣಗೆರೆ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ನಡೆದಿದೆ.

ಸಿದ್ದಪ್ಪ ಹಾಗೂ ದುರ್ಗಮ್ಮ ಎಂಬವರು ಹಲವು ವರ್ಷಗಳಿಂದ ಗೋಮಾಳ ಜಾಗದಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅದೇ ಗ್ರಾಮದ ನಾಗರಾಜು ಎಂಬವರು ಅದೇ ಗೋಮಾಳದ ಜಮೀನಿಗಾಗಿ ತಕರಾರು ಮಾಡುತ್ತಿದ್ದರು. ಹಾಗಾಗಿ ಗೋಮಾಳದ ಜಮೀನಿನ ವಿಚಾರ ಕೋರ್ಟ್ ಮೆಟ್ಟಲೇರಿತ್ತು.

ಕೋರ್ಟ್ ಇದೇ ತಿಂಗಳ 28 ರಂದು ನಾಗರಾಜ್ ಎನ್ನುವರಿಗೆ ಉಳುಮೆ ಮಾಡುವಂತೆ ಅದೇಶ ನೀಡಿತ್ತು. ಆದರೆ ಕೋರ್ಟ್ ಅದೇಶವನ್ನು ಪ್ರಶ್ನಿಸಿ ಸಿದ್ದಪ್ಪನ ಕುಟುಂಬದವರು ಕೋರ್ಟ್ ನಲ್ಲಿ ತಕರಾರು ಹಾಕಿದ್ರು. ಆ ಕಾರಣಕ್ಕೆ ಶುಕ್ರವಾರ ನಾಗರಾಜ್ ಕುಟುಂಬದವರು ಜಮೀನು ಉಳುಮೆ ಮಾಡುವಾಗ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿದೆ.

ನಾಗರಾಜ್ ಎಂಬವರಿಗೆ ಸೇರಿದ್ದ ಟ್ರ್ಯಾಕ್ಟರ್ ಕೆಳಗೆ ಮಲಗಿ ಉಳುಮೆ ಮಾಡುವುದಕ್ಕೆ ಸಿದ್ದಪ್ಪ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *