ಗುಂಡೂರಾವ್ ಪಕ್ಕದಲ್ಲೇ ಕೂರಬೇಕೆಂದು ಕುರ್ಚಿಗಾಗಿ ಕಿತ್ತಾಡಿದ ಮುಖಂಡರು!

Public TV
2 Min Read

ಬೆಳಗಾವಿ: ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪಕ್ಕದಲ್ಲೇ ಕೂರಬೇಕೆಂದು ಕುರ್ಚಿಗಾಗಿ ಸ್ಥಳೀಯ ಮುಖಂಡರು ಕಿತ್ತಾಟ ನಡೆಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮೋಹನ್ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್ ನಡುವೆ ಗಲಾಟೆ ಪ್ರಾರಂಭವಾಗಿದೆ. ತನ್ನ ತಮ್ಮನಿಗೆ ಕುರ್ಚಿ ಬಿಟ್ಟುಕೊಡುವಂತೆ ಮೋಹನ್ ಗೆ ಫಿರೋಜ್ ಸೇಠ್ ಅವಾಜ್ ಹಾಕಿದ್ದಾರೆ. ಬಳಿಕ ದಿನೇಶ್ ಗುಂಡೂರಾವ್ ಅವರೇ ಕುರ್ಚಿಗಾಗಿ ಕಿತ್ತಾಡುತ್ತಿದ್ದ ಮುಖಂಡರನ್ನು ಸಮಾಧಾನಪಡಿಸಿದ್ದಾರೆ.

ಕುರ್ಚಿ ಕಿತ್ತಾಟ ಶಮನಗೊಳಿಸಿ ಮಾತನಾಡಿದ ಗುಂಡೂರಾವ್, ಕಾಂಗ್ರೆಸ್ ಪಕ್ಷ ಎಲ್ಲಾ ಕಡೆಗಳಲ್ಲಿ ಸ್ಪರ್ಧೆ ಮಾಡಿದೆ. ನಮಗೆ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡಲಿಲ್ಲ ಅಂತ ಜನರು ನಮ್ಮನ್ನ ತಿರಸ್ಕಾರ ಮಾಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಬೇರೆ ಬೇರೆ ಕಾರಣವಿದೆ. ಮುಂದಿನ ಲೋಕಸಭಾ ಚುನಾವಣೆಯ ಬೆಳಗಾವಿ, ಚಿಕ್ಕೋಡಿ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದರು.

ಸಾಲ ಮನ್ನಾ ವಿಚಾರದಲ್ಲಿ ಸಿಎಂ ಎಚ್‍ಡಿಕೆ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾವುದೇ ತೀರ್ಮಾನ ಆದರೂ ಅದರಲ್ಲಿ ಇಬ್ಬರ ಪಾತ್ರ ಇರುತ್ತದೆ. ಸಾಲ ಮನ್ನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಒಂದೇ ಪಕ್ಷದ ಸರ್ಕಾರ ಇದ್ದಾಗ ಸಮನ್ವಯತೆ ಸಮಸ್ಯೆ ಇರುವುದಿಲ್ಲ. ಚುನಾವಣೆಯಲ್ಲಿ ವಿರೋಧ ಮಾಡದ ಪಕ್ಷಗಳು ಒಂದಾದಾಗ ಹೊಂದಾಣಿಕೆ ಸ್ವಲ್ಪ ಕಷ್ಟವಾಗುತ್ತೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲ ಸಹಜ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ಶಾಸಕರಿಗೆ ಹಣ, ಅಧಿಕಾರದ ಆಮೀಷ ಒಡ್ಡುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ಈಗ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ದೇಶಕ್ಕೆ ಮೋದಿ ಕೊಡುಗೆ ಏನು? ಬಿಜೆಪಿ ಕಾರ್ಯಕ್ರಮವೇ ಜನರ ದಿಕ್ಕು ತಪ್ಪಿಸುವುದು ಆಗಿದೆ ಎಂದು ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *