ಕಲಬುರಗಿ: ನಗರದ ರಸ್ತೆಯಲ್ಲಿ ಯುವತಿ ಮತ್ತು ಮಹಿಳಾ ಸಂಚಾರಿ ಪೊಲೀಸ್ ನಡುವಿನ ಜಗಳವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಯವತಿ ಒಬ್ಬರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಅಷ್ಟರಲ್ಲಿ ಟ್ರಾಫಿಕ್ ಮಹಿಳಾ ಅಧಿಕಾರಿಯಾದ ಭಾರತಿ ಎಂಬುವರು ಸ್ಥಳಕ್ಕೆ ಬಂದು ಯುವತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಹೇ ನಿನ್ನ ಲೈಸೆನ್ಸ್ ಎಲ್ಲಿ? ನಿನ್ನ ಬೈಕ್‍ನ ಎಮಿಷನ್ ಟೆಸ್ಟ್ ರಿಪೋರ್ಟ್ ಎಲ್ಲಿದೆ? ಹೆಲ್ಮೆಟ್ ಎಲ್ಲಿದೆ ಎಂದು ಪ್ರಶ್ನಿಸಿ ಬೈಕ್ ಸಿಜ್ ಮಾಡಲು ಮುಂದಾಗಿದ್ದಾರೆ. ನೀನು 1000 ರೂ. ದಂಡ ಕಟ್ಟು ಆಮೇಲೆ ನಿನ್ನ ಬೈಕ್ ಬಿಡ್ತಿನಿ ಎಂದು ಯುವತಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
https://www.youtube.com/watch?v=VXxP7CRchaI
ಕೇವಲ ಹೆಲ್ಮೆಟ್ ಇಲ್ಲದಿದ್ದಕ್ಕೆ 1000 ರೂ. ಯಾಕೆ ದಂಡ ಕಟ್ಟಬೇಕು? ಎಂದು ಯವತಿ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಅಧಿಕಾರಿ ನೀನು ಹಣ ಕಟ್ಟದೇ ಇದ್ದಲ್ಲಿ ನಿನ್ನ ಬೈಕ್ ಸಿಜ್ ಮಾಡ್ತೀನಿ. ಕಚೇರಿಗೆ ಬಂದು ಬೈಕ್ ಬಿಡಿಸಿಕೊಂಡು ಹೋಗು ಎಂದು ಹೇಳಿದ್ದಾರೆ. ಇದರಿಂದ ಕೆಂಡಮಂಡಲವಾದ ಯುವತಿ ಹೋಗಮ್ಮ ಹೋಗು ನನ್ನ ಬೈಕ್ ಎಲ್ಲಾದರು ಒಯಿ, ಏನಾದರು ಮಾಡು. ನಾನ್ಯಾಕೆ 1000 ಕೊಡಲಿ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಒಂದು ಗಂಟೆಗೂ ಅಧಿಕ ಇಬ್ಬರ ನಡುವಿನ ಕಚ್ಚಾಟ ನೆರದಿದ್ದವರಿಗೆ ಮನರಂಜನೆ ಒದಗಿಸಿದರೆ, ಆ ಪೊಲೀಸ್ ಅಧಿಕಾರಿ ಮಾತ್ರ ಸ್ವಲ್ಪವೂ ಮಾನವೀಯತೆ ಇಲ್ಲದೇ ವರ್ತಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರಾಫಿಕ್ ನಿಯಮಗಳ ಪಾಲನೆ ನೆಪದಲ್ಲಿ ಕಲಬುರಗಿ ಟ್ರಾಫಿಕ್ ಪೊಲೀಸರು ಗುಂಡಾ ವರ್ತನೆ ತೋರುತ್ತಿದ್ದಾರೆ ಮತ್ತು ಮನಬಂದಂತೆ ದಂಡ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.