ಗದಗ: ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ವೈಷಮ್ಯ ಹಿನ್ನೆಲೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ ರಾಜು ಕಲಾಲ ಎಂಬವರಿಗೆ ಸೇರಿದ ಸಂಜು ಡಾಬಾದಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ನರಗುಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಹೊಡೆದಾಟ ನಡೆದಿದೆ.
ನರಗುಂದ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಬಿ.ಆರ್ ಯಾವಗಲ್ ರ ಪುತ್ರರಾದ ಡಾ. ಸಂತೋಷ, ಪ್ರವೀಣ್ ಹಾಗು ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ ಪಾಟೀಲ್ ಮೂವರು ಪುತ್ರರಾದ ಮಹೇಶಗೌಡ, ಸಂಗನಗೌಡ, ಉಮೇಶಗೌಡರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಮುಖಂಡ ರಾಜು ಕಲಾಲ ಮಧ್ಯರಾತ್ರಿವರೆಗೂ ಡಾಬಾ ತೆರೆದಿರುತ್ತಾರೆ. ಮತದಾರರಿಗೆ ಊಟ ಹಾಗೂ ಡ್ರಿಂಕ್ಸ್ ನೀಡಿ ಪುಸಲಾಯಿಸುತ್ತಾರೆ ಎಂದು ಬಿಜೆಪಿಯವರ ಆರೋಪಿಸುತ್ತಾರೆ.
ಇನ್ನು ಊಟದ ನೆಪದಲ್ಲಿ ಡಾಬಾಗೆ ಬಂದು ಸುಕಾಸುಮ್ಮನೆ ಜಗಳ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿ ಡಾಬಾ ಧ್ವಂಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜು ಕಲಾಲ ಹಾಗೂ ಬೆಂಬಲಿಗರ ಆರೋಪವಾಗಿದೆ. ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ್ ಸಹ ಈ ಗಲಾಟೆ ವೇಳೆ ಸ್ಥಳದಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ. ಅವರೇ ಬಂದು ಮುಂದೆ ನಿಂತು ಗಲಾಟೆ ಮಾಡಿಸಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ.
ಇದರಲ್ಲಿ ಎರಡು ಪಕ್ಷದ ಕಾರ್ಯಕರ್ತರರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.