ಕಲಾಪದಲ್ಲಿ ಬಿಎಸ್‍ವೈ, ಸಿಎಂ ಕುಮಾರಸ್ವಾಮಿ ಜಟಾಪಟಿ

Public TV
2 Min Read

– ಕುಮಾರಸ್ವಾಮಿ ಸೊಕ್ಕು ಹಾಗೂ ದಿಮಾಕಿನಿಂದ ವರ್ತಿಸಿದ್ದಾರೆ
– ಯಾತಕ್ಕೆ ನಿಮಗೆ ಹೊಟ್ಟೆ ಉರಿ: ಬಿಎಸ್‍ವೈಗೆ ಸಿಎಂ ಪಂಚ್

ಬೆಳಗಾವಿ: ಸಿಎಂ ಕುಮಾರಸ್ವಾಮಿ ಅವರು ಸೊಕ್ಕು ಹಾಗೂ ದಿಮಾಕಿನಿಂದ ವರ್ತಿಸಿದ್ದಾರೆ. ಸದನಕ್ಕೆ ಸಮರ್ಪಕವಾದ ಉತ್ತರ ಕೊಡದೆ ಅಂತೆ-ಕಂತೆ ಕಟ್ಟಿ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

ಸಾಲಮನ್ನಾ ವಿಚಾರವಾಗಿ ಇಂದು ಮಧ್ಯಾಹ್ನ ವಿರಾಮದ ಬಳಿಕ ನಡೆದ ಕಲಾಪದಲ್ಲಿ ಮಾತನಾಡಿದ ಅವರು, ಉತ್ತರ ಕೊಡುವಾಗ ಕುಮಾರಸ್ವಾಮಿ ಅವರು ದುರಹಂಕಾರದಿಂದ ವರ್ತಿಸುತ್ತಾರೆ. ಸಾಲಮನ್ನಾ ಮಾಡಲಾಗದೆ ಬ್ಯಾಂಕ್‍ಗಳ ಮೇಲೆ ಹರಿಹಾಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಗರಂ ಆದ ಸಿಎಂ ಕುಮಾರಸ್ವಾಮಿ ಅವರು, ಸಾಲದ ಹಣ ಪಾವತಿಗೆ ನೀವೇ ಒಪ್ಪಿಗೆ ಕೊಟ್ಟಿರುವಿರಿ. ಅದಕ್ಕೆ ಬೇಕಾಗಿರುವ 6.50 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಅದನ್ನು ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡುವುದಿಲ್ಲ. 1,97,625 ರೈತರ ಬ್ಯಾಂಕ್ ಸಾಲ ಪರಿಶೀಲನೆ ಮಾಡಲಾಗಿದೆ. ನನ್ನ ಸರ್ಕಾರ ಭದ್ರವಾಗಿದೆ. ಹಣ ಪಾವತಿ ಮಾಡಿದ ಮೇಲೆ ಯಾವ ಬ್ಯಾಂಕ್ ಗಳ ಒಪ್ಪಿಗೆಯೂ ಬೇಕಾಗಿಲ್ಲ ಎಂದು ಮೇಜು ತಟ್ಟಿ ಹೇಳಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ ಅವರು, ಸದನದಲ್ಲಿ ಸಭ್ಯವಾಗಿ ವರ್ತನೆ ಮಾಡಿ, ಸಾಲಮನ್ನಾ ಮಾಡಲು ನಾಲ್ಕು ವರ್ಷ ಬೇಕು ಅಂತ ಹೇಳಿದ್ದು ನೀವೇ ಎಂದು ಗುಡುಗಿದರು. ಸಿಎಂ ಮಾತು ಮುಂದುವರಿಸಿ, ನಾನು ಹೇಳುವುದನ್ನು ಸಮಾಧಾನವಾಗಿ ಕೇಳಿ. ಏಕೆ ನಿಮಗೆ ಇಷ್ಟು ಹೊಟ್ಟೆ ಉರಿ, ಕುಳಿತುಕೊಳ್ಳಿ ಎಂದು ವ್ಯಂಗ್ಯವಾಡಿದರು. ಆದರೂ ಯಡಿಯೂರಪ್ಪ ಅವರು ಮಾತನಾಡುತ್ತಲೇ ಇದ್ದರು. ಇದರಿಂದ ಕೋಪಗೊಂಡ ಸಿಎಂ ರೀ.. ಕೂಡ್ರಿ… ಎಂದು ಗದರಿಸಿದರು.

ಜನರ ಮುಂದೆ ಮಾತನಾಡುವ ಸರ್ಕಾರ ಮೇಲೆ ಅನುಮಾನ ಬರುವ ತರಹ ನೀವು ಏಕೆ ಮಾತನಾಡುತ್ತಿರಾ? ಎಂದು ಸಿಎಂ ಗುಡುಗಿದರು. ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಶಾಸಕರು ಮಾತಿಗೆ ಮಾತು ಬೆಳೆಸಿದರು. ನಾನೊಬ್ಬ ಜವಾಬ್ದಾರಿ ಮುಖ್ಯಮಂತ್ರಿಯಾಗಿ ಇಲ್ಲಿ ಕುಳಿತಿರುವೆ ಎಂದು ಕುಮಾರಸ್ವಾಮಿ ಗುಡುಗಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಿಎಂಗೆ ಸಾಥ್ ನೀಡಿದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಾವು ಕುಳಿತಿದ್ದ ಜಾಗದಿಂದ ಎದ್ದು ಬಂದು ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿದರು. ವಾಗ್ದಾಳಿ ಜೋರಾಗುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಜಾಗವನ್ನು ಬಿಟ್ಟು ಸಭಾಪತಿಗಳ ಮುಂದೆ ಬಂದು ನಿಂತರು. ಅವರ ಹಿಂದೆ ಬಿಜೆಪಿಯ ಶಾಸಕರು ಬಂದರು.

ಸಿಎಂ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಮಾನ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ನಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿ ಪಕ್ಷದ ಸದಸ್ಯರ ಕ್ಷಮೆ ಕೇಳಬೇಕು. ಕ್ಷಮೆ ಕೇಳುವವರೆಗೂ ಸದನ ನಡೆಯಲು ಬಿಡಲ್ಲ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

ಕೆಲವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಪಕ್ಷ ಶಾಸಕರು ದಿಕ್ಕಾರ ದಿಕ್ಕಾರ ಎನ್ನುತ್ತಿದ್ದಂತೆ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಕರು ಕೇಂದ್ರ ಸರ್ಕಾರಕ್ಕೆ ಎಂದು ಹೇಳುತ್ತಿದ್ದರು. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಸಭಾಪತಿ ರಮೇಶ್ ಕುಮಾರ್ ಅವರು ಸಭೆಯನ್ನು ಮುಕ್ತಾಯ ಮಾಡಿ ಹೊರನಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *