ಚಿತ್ರದುರ್ಗ: ಮದುವೆಗೆ ಬಂದಿದ್ದ ಪತ್ನಿಯನ್ನು ಮಾತಾಡಬೇಕು ಬಾ ಎಂದ ಪತಿಯಿಂದಾಗಿ ಮದುವೆ ಮನೆಯಲ್ಲಿ ಗುಂಪು ಘರ್ಷಣೆ ಚಿತ್ರದುರ್ಗದಲ್ಲಿ ನಡೆದಿದೆ.
ನಗರದ ಕೋರ್ಟ್ ಬಳಿಯ ಹೋಲಿ ಫ್ಯಾಮಿಲಿ ಚರ್ಚ್ ಸಭಾಂಗಣ ಬಳಿ ಈ ಘಟನೆ ನಡೆದಿದೆ. ಶುಕ್ರವಾರ ಈ ಸಭಾಂಗಣದಲ್ಲಿ ಜ್ಯೋತಿ ಮತ್ತು ಕಾಂತರಾಜ್ ಮದುವೆ ನಡೆಯುತ್ತಿತ್ತು. ಹೀಗಾಗಿ ನಗರದ ಹೊರವಲಯದಲ್ಲಿರುವ ಹೋಚಿ ಬೋರಯ್ಯ ಬಡಾವಣೆಯ ಚಂದ್ರಪ್ಪ ಸಹ ಸಂಬಂಧಿಯ ಮದುವೆಗೆ ಬಂದಿದ್ದ.
ಚಂದ್ರಪ್ಪ ಮದುವೆಗೆ ಬಂದವನು ತನ್ನ ಪಾಡಿಗೆ ತಾನು ಮದುವೆ ಮುಗಿಸಿಕೊಂಡು ಹೋಗುವ ಬದಲಾಗಿ ಮೂರ್ನಾಲ್ಕು ತಿಂಗಳಿನಿಂದ ತನ್ನ ವಿರುದ್ಧ ಮುನಿಸಿಕೊಂಡು ತವರು ಮನೆ ಸೇರಿದ್ದ ತನ್ನ ಪತ್ನಿ ಅನಸೂಯಮ್ಮಳನ್ನು ಮದುವೆ ಮನೆಯಲ್ಲಿ ಭೇಟಿಯಾದನು. ಈ ವೇಳೆ ಚಂದ್ರಪ್ಪ ಮಾತಾಡಬೇಕು ಬಾ ಎಂದು ತನ್ನ ಪತ್ನಿಗೆ ಕರೆದಿದ್ದಾನೆ. ಪತ್ನಿಯನ್ನು ಕರೆದ ಪರಿಣಾಮ ಆಕೆಯ ಸಹೋದರರು ಮತ್ತು ಚಂದ್ರಪ್ಪ ನಡುವೆ ಗಲಾಟೆ ಶುರುವಾಗಿದೆ. ಅಷ್ಟೇ ಅಲ್ಲದೆ ಮದುವೆ ಮಂಟಪದಿಂದ ಹೊರ ಬಂದು ವಾಗ್ವಾದದಲ್ಲಿ ತೊಡಗಿದ್ದು, ಬಳಿಕ ಎರಡೂ ಕಡೆಯವರ ನಡುವೆ ಗುಂಪು ಘರ್ಷಣೆ ನಡೆಯಿತು.
ಈ ವಿಷಯ ತಿಳಿಯುತ್ತಿದ್ದಂತೆ ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆರೋಪಿ ಚಂದ್ರಪ್ಪನನ್ನು ವಶಕ್ಕೆ ಪಡೆದರು. ಆದರೆ ಮದುವೆಗೆ ಚಂದ್ರಪ್ಪ ಹಾಗೂ ಆತನ ಪತ್ನಿ ಜಗಳಕ್ಕೂ ಸಂಬಂಧವಿಲ್ಲ ಎಂದು ವಧು-ವರನ ಕಡೆಯವರು ಹೇಳಿದ್ದರು. ಅಂತೆಯೇ ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೈಗೊಳ್ಳಲಾಗುವುದು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ಪತಿ-ಪತ್ನಿಯ ಜಗಳ ಮದುವೆಯ ಸಂಭ್ರಮವನ್ನು ಕೆಡಿಸಿದೆ. ಸದ್ಯ ಬಡಾವಣೆ ಠಾಣೆ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv