ಕರಾವಳಿಗೂ ಬಂತು ಬಿರುಬಿಸಿಲ ಕಾಲ! – ಬಿಸಿಲಿನ ಝಳದಲ್ಲಿ ದಾಖಲೆ

Public TV
2 Min Read

ಮಂಗಳೂರು: ಕರಾವಳಿಯ ಮಂಗಳೂರು ಅಕ್ಷರಶಃ ಈಗ ಕಾದ ಕಾವಲಿಯಾಗಿದೆ. ಬಿರುಬಿಸಿಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯವಾಗಿ ಸಮೃದ್ಧವಾಗಿ ಮಳೆಯಾಗುವ ನಾಡು ಕರಾವಳಿ, ಪಶ್ಚಿಮ ಘಟ್ಟದ ತಪ್ಪಲಿನಿಂದ ಸಮುದ್ರ ತೀರದ ತನಕ ಧಾರಾಕಾರ ಮಳೆಯಾಗುತ್ತದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ಬರದ ದವಡೆಗೆ ಸಿಲುಕಿದೆ. ಇದೀಗ ಬಿಸಿಲ ಝಳ ಜನರ ಜೀವನವನ್ನು ದುಸ್ತರಗೊಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಜನರು ಮನೆಯಿಂದ ಹೊರ ಬರುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಬಹುಶಃ ಈ ಶತಮಾನದಲ್ಲೇ ಮೊದಲ ಬಾರಿಗೆ ಹೀಗಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 30 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿಯೇ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಈ ವರ್ಷ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಝಳ ತೀವ್ರಗೊಂಡಿದೆ. ಈಗಲೇ ಸರಾಸರಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇನ್ನೂ ಮೂರು ತಿಂಗಳು ಹೇಗೆ ಕಳೆಯುವುದು ಎನ್ನುವ ಆತಂಕ ಜನರನ್ನು ಆವರಿಸುತ್ತಿದೆ.

ಕಳೆದ ಡಿಸೆಂಬರ್ ಎರಡನೇ ವಾರದಲ್ಲೂ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅನಂತರ ರಾತ್ರಿಯ ಕಾಲದಲ್ಲಿ ಚಳಿ ಇತ್ತು. ಮೋಡ ಕವಿದ ವಾತಾವರಣ ಇದ್ದ ಕಾರಣ ಬಿಸಿಲಿನ ತಾಪ ಕೂಡ ಬಿರುಸಾಗಿತ್ತು. ಇದೀಗ ಫೆಬ್ರುವರಿ ಮಧ್ಯದಲ್ಲಿಯೇ ತಾಪಮಾನ ಹೆಚ್ಚಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ 32 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ, ಎರಡನೇ ವಾರದಲ್ಲಿ 36 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗಿತ್ತು. ಇದೀಗ ಮೂರನೇ ವಾರದಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್‍ಗೆ ಹೆಚ್ಚಾಗಿದೆ. ವಾರವಿಡೀ 38 ರಿಂದ 39 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿಯೇ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಪ್ರಮಾಣ ಹೆಚ್ಚು ಕಡಿಮೆ ಆದರೂ, ಕಳೆದ ಐದಾರು ವರ್ಷಗಳಿಂದ ಉಷ್ಣಾಂಶದಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗುತ್ತಿದೆ. ಆದರೆ, 20 ಡಿಗ್ರಿ ಸೆಲ್ಸಿಯಸ್‍ನಷ್ಟು ಇರುತ್ತಿದ್ದ ಕನಿಷ್ಠ ಉಷ್ಣಾಂಶ, ಈ ವರ್ಷ ಈಗಾಗಲೇ 24 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ವರ್ಷ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಆಗಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಜನರ ಬವಣೆ ಹೆಚ್ಚುತ್ತಿದೆ. ಸಮುದ್ರ ತೀರದ ನಗರವಾದ್ದರಿಂದ ಆರ್ದ್ರತೆ ಹೆಚ್ಚು. ಹೀಗಾಗಿ ಸಾಮಾನ್ಯ ದಿನಗಳಲ್ಲೂ ಸೆಖೆಯ ವಾತಾವರಣ ಇರುತ್ತದೆ. ಇದರ ಜತೆಗೆ ಉಷ್ಣಾಂಶದಲ್ಲೂ ಏರಿಕೆ ಆಗುತ್ತಿದ್ದು, ದಿನಕ್ಕೆ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಬಿಸಿಲಿನ ಪ್ರಮಾಣ ಏರಿಕೆ ಆಗುತ್ತಿರುವುದರಿಂದ ಮಧ್ಯಾಹ್ನದ ವೇಳೆ ನಗರದ ಎಲ್ಲ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗುತ್ತಿವೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯೂ ಕಡಿಮೆ ಇರುತ್ತದೆ. ಜತೆಗೆ ರಸ್ತೆಗಳಲ್ಲಿ ಜನರ ಓಡಾಟವೂ ವಿರಳವಾಗುತ್ತದೆ. ಬೆಳಿಗ್ಗೆ ಕಚೇರಿಗೆ ಹೋದರೆ, ಮತ್ತೆ ಹೊರಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಚೇರಿಯಲ್ಲಿಯೇ ಇರುವುದು ಅನಿವಾರ್ಯವಾಗುತ್ತಿದೆ. ಬೇರೆ ಕೆಲಸಗಳಿದ್ದರೂ, ಕಚೇರಿಯಿಂದ ಹೊರಗೆ ಬರಲಾರದಂತಹ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಬೀದಿ ಬದಿ ವ್ಯಾಪಾರಿಗಳೂ, ಗ್ರಾಹಕರಿಲ್ಲದೇ ನೆರಳಿನಲ್ಲಿ ವಿಶ್ರಾಂತಿ ಪಡೆಯುವಂತಾಗಿದೆ. `ಬೆಳಿಗ್ಗೆ ಸ್ವಲ್ಪ ಜನ ಖರೀದಿಗೆ ಬರುತ್ತಾರೆ. ಮತ್ತೆ ಬರುವುದು ಸಂಜೆಯ ನಂತರವೇ. ಬಿಸಿಲು ಹೆಚ್ಚಾಗಿರುವುದರಿಂದ ಮಧ್ಯಾಹ್ನದ ವೇಳೆಯಲ್ಲಿ ಜನರ ಓಡಾಟ ಕಡಿಮೆ ಆಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ, ಈಗ ವ್ಯಾಪಾರ ಮಂದಗತಿಯಲ್ಲಿದೆ’ ಎನ್ನುತ್ತಾರೆ ಮಂಗಳೂರಿನ ವ್ಯಾಪಾರಿಗಳು.

 

Share This Article
Leave a Comment

Leave a Reply

Your email address will not be published. Required fields are marked *