ಜ್ಯೂನಿಯರ್ ಹುಟ್ಟುಹಬ್ಬಕ್ಕೆ ‘ದೇವರ’ ಚಿತ್ರದ ಫಿಯರ್ ಸಾಂಗ್

Public TV
1 Min Read

ಜ್ಯೂನಿಯರ್  ಎನ್‌ಟಿಆರ್‌ (Junior NTR) ಅಭಿನಯದ ‘ದೇವರ’ (Devara) ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸಿದರೆ, ಸೈಫ್‌ ಅಲಿ ಖಾನ್‌ ವಿಲನ್‌ ಆಗಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಪಾರ್ಟ್‌ ಅಕ್ಟೋಬರ್ 10 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಇದೀಗ NTR ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡು ಫಿಯರ್‌ ಸಾಂಗ್‌ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಸರಸ್ವತಿ ಪುತ್ರ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಷ್ಣು ಎಡವನ್, ಹಿಂದಿಯಲ್ಲಿ ಮನೋಜ್ ಮುಂತಶಿರ್, ಕನ್ನಡದಲ್ಲಿ ವರದರಾಜ್ ಮತ್ತು ಮಲಯಾಳಂನಲ್ಲಿ ಮಂಕೊಂಬು ಗೋಪಾಲಕೃಷ್ಣನ್ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅನಿರುದ್ಧ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಈ ಹಾಡು ಇತರ ಭಾಷೆಗಳಲ್ಲಿಯೂ ಅಷ್ಟೇ ಶಕ್ತಿಶಾಲಿ ಮತ್ತು ಅದ್ಭುತವಾಗಿದೆ. ಲಿರಿಕಲ್ ವೀಡಿಯೋದಲ್ಲಿ ಅನಿರುದ್ಧ್ ರವಿಚಂದರ್ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಹಾಡಿದ್ದರೆ, ಸಂತೋಷ್ ವೆಂಕಿ ಕನ್ನಡ ಮತ್ತು ಮಲಯಾಳಂನಲ್ಲಿ ಧ್ವನಿ ನೀಡಿದ್ದಾರೆ. ಈ ಮೂಲಕ ದೇವರ ಚಿತ್ರದ ಪ್ರಚಾರಕ್ಕೆ ಈ ಹಾಡಿನ ಮೂಲಕ ಆರಂಭ ಸಿಕ್ಕಿದೆ.

ದೇವರ ಚಿತ್ರದಲ್ಲಿ ಶೀರ್ಷಿಕೆ ಪಾತ್ರದಲ್ಲಿ ಎನ್‌ಟಿಆರ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್‌ನ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.  ನಂದಮೂರಿ ಕಲ್ಯಾಣ್ ರಾಮ್ ಈ ಬಹು ನಿರೀಕ್ಷಿತ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ಈ ಚಿತ್ರದ ನಿರ್ಮಾಪಕರು. ಶ್ರೀಕರ್ ಪ್ರಸಾದ್ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

Share This Article