ಭಾರತದ ಪರ ಮಾತನಾಡಿದ್ದ ಅಮೆರಿಕ ಮಾಜಿ NSA ಬೋಲ್ಟನ್‌ ಮನೆಗೆ ಎಫ್‌ಬಿಐ ದಾಳಿ

Public TV
2 Min Read

ವಾಷಿಂಗ್ಟನ್‌: ಅಮೆರಿಕದ (USA) ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA), ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ, ಜಾನ್‌ ಬೋಲ್ಟನ್‌ (John Bolton) ಅವರ ಮನೆಗೆ ಎಫ್‌ಬಿಐ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ಶುಕ್ರವಾರ ಬೆಳಗ್ಗೆ ಜಾನ್ ಬೋಲ್ಟನ್ ಅವರ ವಾಷಿಂಗ್ಟನ್ ಡಿಸಿಯಲ್ಲಿರುವ ನಿವಾಸದ ಮೇಲೆ ಎಫ್‌ಬಿಐ (FBI) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಮೊದಲ ಅವಧಿಯಲ್ಲಿ ಭದ್ರತಾ ಸಲಹೆಗಾರಾಗಿದ್ದ ಜಾನ್‌ ಬೋಲ್ಟನ್‌ ಈಗ ಟ್ರಂಪ್‌ ಸುಂಕ ನೀತಿಗಳನ್ನು ಕಟು ಪದಗಳಿಂದ ಟೀಕಿಸುತ್ತಿದ್ದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ಮತ್ತು ಅಮೆರಿಕ ಸಂಬಂಧ ಈಗ ಬಹಳಷ್ಟು ಹದಗೆಟ್ಟಿದೆ. ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವ ಭಾರತದ ಮೇಲೆ ದಂಡವಾಗಿ 25% ಸುಂಕ ಹೇರುತ್ತಿರುವ ಟ್ರಂಪ್‌ ಚೀನಾಗೆ ವಿನಾಯಿತಿ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಬಂಧನ

ಟ್ರಂಪ್ ಪುಟಿನ್ ಅವರನ್ನು ಸಭೆಗೆ ಅಲಾಸ್ಕಾಗೆ ಆಹ್ವಾನಿಸಿದ್ದನ್ನು ಬೋಲ್ಟನ್ ಟೀಕಿಸಿದ್ದರು. ಸಭೆಗೂ ಮೊದಲೇ ಅಮೆರಿಕದ ಮಣ್ಣಿಗೆ ಸ್ವಾಗತಿಸಿದ್ದು ಪುಟಿನ್ ಅವರು ಜಯಗಳಿಸಿದ್ದಾರೆ ಎಂದು ತಿಳಿಸಿದ್ದರು. ಬೋಲ್ಟನ್‌ ಅವರ ಈ ವಿಶ್ಲೇಷಣೆಯನ್ನು ಟ್ರಂಪ್‌ ಇದು ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದರು.

17 ತಿಂಗಳುಗಳ ಕಾಲ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತಾ ಸಲಹೆಗಾರರಾಗಿದ್ದ ಬೋಲ್ಟನ್‌ ಇರಾನ್, ಅಫ್ಘಾನಿಸ್ತಾನ ಮತ್ತು ಉತ್ತರ ಕೊರಿಯಾ ಸೇರಿದಂತೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

ಬೋಲ್ಟನ್ ಅವರ ಪುಸ್ತಕದ ಬಿಡುಗಡೆಯನ್ನು ತಡೆಯಲು ಟ್ರಂಪ್ ಸರ್ಕಾರ ಬಹಳ ಪ್ರಯತ್ನಿಸಿತ್ತು. ಈ ವರ್ಷದ ಆರಂಭದಲ್ಲಿ ಅಧ್ಯಕ್ಷ ಟ್ರಂಪ್ ಅವರು ಅಧಿಕಾರಕ್ಕೆ ಮರಳಿದಾಗ 40 ಕ್ಕೂ ಹೆಚ್ಚು ಮಾಜಿ ಗುಪ್ತಚರ ಅಧಿಕಾರಿಗಳ ಭದ್ರತಾ ಅನುಮತಿಗಳನ್ನು ರದ್ದುಗೊಳಿಸಿದ್ದರು. ಈ ಪಟ್ಟಿಯಲ್ಲಿ ಬೋಲ್ಟನ್ ಅವರ ಹೆಸರೂ ಸೇರಿತ್ತು. ಭದ್ರತಾ ಅನುಮತಿಗಳನ್ನು  ರದ್ದುಗೊಳಿಸಿದ ಮೂವರು ಮಾಜಿ ಟ್ರಂಪ್ ಸಹಾಯಕರಲ್ಲಿ ಅವರು ಒಬ್ಬರಾಗಿದ್ದರು.

Share This Article