ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

Public TV
2 Min Read

ವಾಷಿಂಗ್ಟನ್‌: ಕೃಷಿ ಬೆಳೆಯನ್ನೇ ಹಾಳು ಮಾಡಬಹುದಾದ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಅಡಿ ಇಬ್ಬರು ಚೀನೀ ಪ್ರಜೆಗಳನ್ನು (China Citizen) ಅಮೆರಿಕದಲ್ಲಿ (USA) ಬಂಧಿಸಲಾಗಿದೆ

ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ (Kash Patel) ಮಂಗಳವಾರ ಇಬ್ಬರು ಚೀನಿ ಸಂಶೋಧಕರನ್ನು(Chinese Researcher) ಬಂಧಿಸಿದ್ದನ್ನು ದೃಢಡಪಡಿಸಿದ್ದಾರೆ. ಎಕ್ಸ್‌ ಖಾತೆಯಲ್ಲಿ ವಿವರವಾದ ಪೋಸ್ಟ್‌ ಪ್ರಕಟಿಸಿ ಇಬ್ಬರ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ದೇಶಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು (Hazardous Biological Pathogen) ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ  ಚೀನಿ ಸಂಶೋಧಕಿಯನ್ನು ಎಫ್‌ಬಿಐ ಬಂಧಿಸಿದೆ.

 

ಯುನ್‌ಕಿಂಗ್ ಜಿಯಾನ್ “ಫ್ಯುಸಾರಿಯಮ್ ಗ್ರಾಮಿನೇರಮ್” ಎಂಬ ಅಪಾಯಕಾರಿ ಶಿಲೀಂಧ್ರವನ್ನು ತಾನು ಕೆಲಸ ಮಾಡುವ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದಾಳೆ. ಈ ಶಿಲೀಂಧ್ರವು ಗೋಧಿ, ಬಾರ್ಲಿ, ಜೋಳ ಮತ್ತು ಭತ್ತ ಬೆಳೆಗೆ ಬರುವ ಹೆಡ್ ಬ್ಲೈಟ್(ಏಕದಳ ಬೆಳೆಗಳ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ರೋಗ. ಈ ರೋಗ ಬಂದರೆ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ) ರೋಗಕ್ಕೆ ಕಾರಣವಾಗಬಹುದು. ಈ ಬೆಳೆಯನ್ನು ಸೇವಿಸಿದರೆ ಜನರ ಮತ್ತು ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಈ ಅಪಾಯಕಾರಿ ಶಿಲೀಂಧ್ರದಿಂದಾಗಿ ಪ್ರತಿ ವರ್ಷ ವಿಶ್ವಾದ್ಯಂತ ಶತಕೋಟಿ ಡಾಲರ್‌ ಆರ್ಥಿಕ ನಷ್ಟವಾಗುತ್ತಿದೆ.

ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ತಾನು ನಿಷ್ಠೆಯನ್ನು ಹೊಂದಿರುವುದಾಗಿ ಜಿಯಾನ್ ಹೇಳಿದ್ದಾಳೆ. ಚೀನಾದಲ್ಲಿ ಈ ರೋಗಕಾರಕದ ಮೇಲೆ ಇದೇ ರೀತಿಯ ಕೆಲಸಕ್ಕಾಗಿ ಚೀನಾ ಸರ್ಕಾರದಿಂದ ಹಣವನ್ನು ಪಡೆದಿದ್ದಕ್ಕೆ  ಈಕೆಯ ಬಳಿ ಪುರಾವೆಗಳು ಸಿಕ್ಕಿದೆ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

ಹೆಡ್ ಬ್ಲೈಟ್ ರೋಗಕ್ಕೆ ತುತ್ತಾದ ಗೋಧಿ ಬೆಳೆ

ಜಿಯಾನ್‌ ಗೆಳೆಯ ಜುನ್ಯೊಂಗ್ ಲಿಯು ಇದೇ ರೋಗಕಾರಕದ ಬಗ್ಗೆ ಸಂಶೋಧನೆ ನಡೆಸುವ ಚೀನೀ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ. ಆರಂಭದಲ್ಲಿ ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗೆಳೆದಿದ್ದ. ನಂತರ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಿಚಿಗನ್ ವಿಶ್ವವಿದ್ಯಾಲಯಲ್ಲಿ ಸಂಶೋಧನೆ ನಡೆಸಲು ಡೆಟ್ರಾಯಿಟ್ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣದ ಮೂಲಕ ಅಮೆರಿಕಕ್ಕೆ ಫ್ಯುಸಾರಿಯಮ್ ಗ್ರಾಮಿನೇರಮ್ ಅನ್ನು ಕಳ್ಳಸಾಗಣೆ ಮಾಡಿರುವುದಾಗಿ ಹೇಳಿದ್ದಾನೆ.

ಇಬ್ಬರ ಮೇಲೆ ಪಿತೂರಿ, ವಸ್ತುಗಳ ಕಳ್ಳ ಸಾಗಾಣೆ, ಸುಳ್ಳು ಹೇಳಿಕೆ ಮತ್ತು ವೀಸಾ ವಂಚನೆ ಎಸಗಿದ ಆರೋಪವನ್ನು ಹೊರಿಸಲಾಗಿದೆ. ಅಮೆರಿಕದ ಆಹಾರ ಪೂರೈಕೆ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾ ತನ್ನ ಕಾರ್ಯಕರ್ತರು ಮತ್ತು ಸಂಶೋಧಕರನ್ನು ನಿಯೋಜಿಸಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಅಮರಿಕದ ಜನರು ಮತ್ತು ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ಚೀನಾ ಕೆಲಸ ಮಾಡುತ್ತಿದೆ. ಈ ಪ್ರಕರಣವನ್ನು ಬಯಲಿಗೆಳೆಯುವ ಮೂಲಕ ನಮ್ಮ ಎಫ್‌ಬಿಐ ತಂಡ ಅತ್ಯುತ್ತಮ ಕೆಲಸ ಮಾಡಿದೆ.

Share This Article