ಹೆಣ್ಣು ಮಗು ಹುಟ್ಟಿದ್ದಕ್ಕೆ ಮೆರವಣಿಗೆ ಮೂಲಕ ತಂದೆಯಿಂದ ಅದ್ಧೂರಿ ಸ್ವಾಗತ

Public TV
2 Min Read

ಗಾಂಧಿನಗರ: ಹೆಣ್ಣು ಮಗು ಜನಸಿದ್ದಕ್ಕೆ ಗುಜರಾತ್ ಸೂರತ್ ನಲ್ಲಿ ತಂದೆಯೊಬ್ಬರು ಅದ್ಧೂರಿಯಾಗಿ ಮಗಳಿಗೆ ಸ್ವಾಗತ ಕೋರಿ ಸುದ್ದಿಯಾಗಿದ್ದಾರೆ.

ರಾಕೇಶ್ ಅಲಿಯಾಸ್ ಗಿರೀಶ್ ಪಟೇಲ್ ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಸುದ್ದಿಯಾಗಿದ್ದಾರೆ. ರಾಕೇಶ್ ಸೂರತ್ ಪುರಸಭೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ 45 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಹೀಯಾ ಎಂದು ನಾಮಕರಣ ಮಾಡಿ ಮನೆಯ ಮಹಾಲಕ್ಷ್ಮೀ ಬಂದಳು ಎಂದು ಭಾವಿಸಿ ರಾಕೇಶ್ ಸಂಭ್ರಮಸಿದ್ದಾರೆ.

ಸೂರತ್‍ನಿಂದ 35 ಕಿ.ಮೀಟರ್ ದೂರದಲ್ಲಿರುವ ಡೆಹೆನ್ ಗ್ರಾಮದ ರಸ್ತೆಯಲ್ಲಿ ಸುಮಾರು 200 ಅಡಿ ಉದ್ದಕ್ಕೂ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮನೆಗೆ ಎಂಟ್ರಿಯಾಗುವ ರಸ್ತೆಯ ಉದ್ದಕ್ಕೂ ಮೆರವಣೆಗೆ ಮಾಡಿ ಕರೆದುಕೊಂಡು ಬಂದಿದ್ದಾರೆ.

ರಾಕೇಶ್ ಪತ್ನಿ ಧರ್ಮಿಷ್ಠಾ ಅವರು ತಮ್ಮ ಪೋಷಕರ ಜೊತೆ ಗ್ರಾಮಕ್ಕೆ ಎಂಟ್ರಿಯಾಗಿದ್ದಾರೆ. ತಾಯಿ ಬರುತ್ತಿದ್ದಂತೆ ಹೂಗುಚ್ಛ ನೀಡಿ ಸ್ವಾಗತಿಸಲಾಗಿದೆ. ತಾಯಿ ಮತ್ತು ಮಗು ಬರುವ ಹಾದಿಯಲ್ಲಿ ರೆಡ್ ಕಾರ್ಪೆಟ್ ಹಾಕಿ, ಹೂ ಹಾಕಿ ಸ್ವಾಗತಿಸಲಾಗಿದೆ. ಈ ವೇಳೆ ಮಹಿಳೆಯರು ಗರ್ಬಾ ನೃತ್ಯ ಮಾಡುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ರಾಕೇಶ್ ತನ್ನ ಮಗಳು ಹಿಯಾಳನ್ನು ಭಾವನಾತ್ಮಕವಾಗಿ ತನ್ನ ಎರಡು ಕೈಗಳಿಂದ ಎತ್ತಿಕೊಂಡು ಆನಂದಿಸಿದ್ದಾರೆ. ಪ್ರೀತಿಯ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಬರಲು ರಾಕೇಶ್, ಸ್ನೇಹಿತರೊಬ್ಬರ ಕಾರನ್ನು ಕೇಳಿದ್ದರು. ಕಾರಿಗೂ ಕೂಡ ಮದುವಣಗಿತ್ತಿಯಂತೆ ಅಲಂಕಾರ ಮಾಡಲಾಗಿತ್ತು.

ಹೀಯಾ ನನಗೆ ಮೊದಲ ಮಗಳಾಗಿ ಜನಿಸಿದ್ದಾಳೆ. ನಮ್ಮ ಮನೆಗೆ ಮಹಾಲಕ್ಷ್ಮೀ ಇದ್ದಂತೆ ನನ್ನ ಮಗಳು. ಆದ್ದರಿಂದ ನನ್ನ ಮಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮನೆಗೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಮ್ಮ ಸಮಾಜಕ್ಕೆ ಹೆಣ್ಣು ಮಗುವಿನ ಮಹತ್ವ ತಿಳಿಸುವ ಉದ್ದೇಶ ನನ್ನದು ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

ಕೆಲ ಕಡೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೋಷಕರು ತಾತ್ಸರ ಮಾಡಿದ್ದಾರೆ ಎನ್ನುವ ಸುದ್ದಿ ಬರುತ್ತಿರುವಾಗ ಗುಜರಾತಿನ ರಾಕೇಶ್ ಅವರ ಸಂಭ್ರಮದ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *