ನಡುರಸ್ತೆಯಲ್ಲೇ ಬಡಿದಾಡ್ಕೊಂಡ ಅಣ್ಣ, ತಮ್ಮ- ಚಿಕ್ಕಪ್ಪನೊಂದಿಗೆ ಸೇರಿ ತಂದೆಗೇ ಥಳಿಸಿದ ಮಗ

Public TV
2 Min Read

ಚಿಕ್ಕಬಳ್ಳಾಪುರ: ಹಾಡಹಗಲೇ ನಡುರಸ್ತೆಯಲ್ಲೇ ಅಣ್ಣ-ತಮ್ಮ ಹೊಡೆದಾಡಿಕೊಂಡಿದ್ದು, ಈವೇಳೆ ಮಗ ಕೂಡ ತಂದೆಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೋಗು ಪೇಟೆಯಲ್ಲಿ ನಡೆದಿದೆ.

ಶಿಡ್ಲಘಟ್ಟ ಪಟ್ಟಣದ ನಾಗರಾಜ್ ಹಲ್ಲೆಗೊಳಗಾದ ವ್ಯಕ್ತಿ. ನಾಗರಾಜ ಸಹೋದರ ಕೃಷ್ಣಪ್ಪ ಹಾಗೂ ನಾಗರಾಜ್ ಮಗ ಚಂದ್ರಶೇಖರ್ ಹಲ್ಲೆ ಮಾಡಿರುವವರು. ನಾಗರಾಜ್‍ಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲನೇ ಪತ್ನಿ ಹೆಸರು ಕಮಲಮ್ಮ ಹಾಗೂ ಎರಡನೇ ಪತ್ನಿ ಹೆಸರು ರತ್ನಮ್ಮ. ನಾಗರಾಜ್ ಸರಿಸುಮಾರು 25 ವರ್ಷಗಳ ಹಿಂದೆ ಕಮಲಮ್ಮ ಹೆಸರಿನಲ್ಲಿ ಕೆಎಸ್‍ಎಫ್‍ಸಿ ಬ್ಯಾಂಕಿನಲ್ಲಿ 1,16,000 ರೂಪಾಯಿ ಸಾಲ ಹಾಗೂ ಶಿಡ್ಲಘಟ್ಟ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 4,60,000 ರೂಪಾಯಿ ಸಾಲ ಪಡೆದಿದ್ದು, ಈ ಹಣದಿಂದ ಜೋಗು ಪೇಟೆಯ ಮನೆಯಲ್ಲಿ ರೇಷ್ಮೆ ಉರಿ ಮಿಷಿನ್ ಕಾರ್ಖಾನೆ(ರೇಷ್ಮೆ ನೂಲು ತೆಗೆಯುವ ಕಾರ್ಖಾನೆ) ಆರಂಭಿಸಿದ್ದನು.

ಆದರೆ ಕೆಲ ವರ್ಷಗಳ ನಂತರ ನಾಗರಾಜ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಎರಡನೇ ಪತ್ನಿ ರತ್ನಮ್ಮಳಿಗೆ ಬಿಟ್ಟು ಕೊಟ್ಟಿದ್ದನು. ಕಾರ್ಖಾನೆಯಲ್ಲಿ ದುಡಿಮೆ ಮಾಡಿಕೊಂಡು ಹಣ ಗಳಿಸುತ್ತಿದ್ದ ರತ್ನಮ್ಮ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲಿಲ್ಲ. ಈ ಮಧ್ಯೆ ಕೆಎಸ್‍ಎಫ್‍ಸಿ ಬ್ಯಾಂಕಿನ 1,16,000 ರೂಪಾಯಿ ಸಾಲವನ್ನು ಮೊದಲ ಹೆಂಡತಿ ಕಮಲಮ್ಮ ಪಾವತಿ ಮಾಡಿದ್ದಾಳೆ. ಇನ್ನೂ ಶಿಡ್ಲಘಟ್ಟ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿದ್ದ ಸಾಲವನ್ನು ಪಾವತಿ ಮಾಡುವಂತೆ ಬ್ಯಾಂಕಿನ ಅಧಿಕಾರಿಗಳು ಕಮಲಮ್ಮಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ನಾಗರಾಜ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡುವಂತೆ ಕಾರ್ಖಾನೆ ಪಡೆದುಕೊಂಡಿರುವ ಎರಡನೇ ಪತ್ನಿ ರತ್ನಮ್ಮಳಿಗೆ ಹೇಳಿದ್ದಾನೆ. ಆದರೆ ರತ್ನಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆಗ ನಾಗರಾಜ್ ಫ್ಯಾಕ್ಟರಿ ವಾಪಸ್ ಬಿಟ್ಟುಕೊಡುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೂ ರತ್ನಮ್ಮ ವಿರೋಧ ವ್ಯಕ್ತಪಡಿಸಿದ್ದಾಳೆ.

ಹೀಗಾಗಿ ರತ್ನಮ್ಮ ಮೇಲೆ ಕೋಪಗೊಂಡ ಪತಿ ನಾಗರಾಜ್, ತಾನು ಆರಂಭ ಮಾಡಿದ್ದ ರೇಷ್ಮೆ ಉರಿ ಮಿಷನ್ ಕಾರ್ಖಾನೆಗೆ ತನ್ನ ಹೆಸರಿನಲ್ಲಿ ನೀಡಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಸ್ಕಾಂಗೆ ಮನವಿ ಮಾಡಿದ್ದನು. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಅಧಿಕಾರಿಗಳ ಜೊತೆ ರೇಷ್ಮೆ ಉರಿ ಕಾರ್ಖಾನೆ ಬಳಿ ಬಂದಿದ್ದ ನಾಗರಾಜ್, ಎರಡನೇ ಪತ್ನಿ ರತ್ನಮ್ಮಳ ಜೊತೆ ಜಗಳ ಮಾಡಿದ್ದನು. ಈ ವೇಳೆ ರತ್ನಮ್ಮ ತನ್ನ ಮೈದುನ ಕೃಷ್ಣಪ್ಪಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ನಾಗರಾಜ್ ಸಹೋದರ ಕೃಷ್ಣಪ್ಪ ಹಾಗೂ ನಾಗರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗರಾಜ್ ಕೃಷ್ಣಪ್ಪರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಈ ಹೊಡೆದಾಟದಲ್ಲಿ ಕೃಷ್ಣಪ್ಪನಿಗೆ ಹಲ್ಲೆಗೊಳಗಾದ ನಾಗರಾಜನ ಸ್ವಂತ ಮಗ ಚಂದ್ರಶೇಖರ್ ಸಹ ಸಾಥ್ ನೀಡಿದ್ದಾನೆ. ಈ ಸಂಬಂಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಹಾಗೂ ಕೃಷ್ಣಪ್ಪ ಇಬ್ಬರು ದೂರು, ಪ್ರತಿದೂರು ದಾಖಲಿಸಿದ್ದಾರೆ. ಈ ಘಟನೆ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರೊಬ್ಬರು ಗಲಾಟೆ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *