ಅಳಿಯನ ಕೊಂದ ಮಾವನಿಗೆ ಜೀವಾವಧಿ ಶಿಕ್ಷೆ

2 Min Read

ಕಾರವಾರ: ಮದ್ಯ ಸೇವಿಸಲು ಹಣ ನೀಡುವುದಿಲ್ಲ ಎಂದು ತನ್ನ ಅಳಿಯನನ್ನೇ ಕೊಂದ ಮಾವನಿಗೆ ಇದೀಗ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿಯ ಗಣಪಾ ಗೌಡ ಎಂಬಾತನ ಮನೆಯಲ್ಲಿ ಅಳಿಯ ಮಂಜುನಾಥ ರಾಮಾ ಗೌಡ (40) ವಾಸವಾಗಿದ್ದ. ಮದ್ಯ ಸೇವಿಸಲು ಹಣ ನೀಡುವುದಿಲ್ಲ ಎಂದು ಅಳಿಯನೊಂದಿಗೆ ಗಣಪಾ ಯಾವಾಗಲೂ ತಗಾದೆ ತೆಗೆಯುತ್ತಿದ್ದ. ಇದನ್ನೂ ಓದಿ: 21 ವರ್ಷದ ಬಳಿಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

2024ರ ಮೇ 2 ರಂದು ಮನೆಯವರೆಲ್ಲರೂ ಸಂಬಂಧಿಕರ ಮದುವೆ ಕಾರ್ಯಕ್ಕೆ ತೆರಳಿದ್ದರು. ಮನೆಯಲ್ಲಿ ಇದ್ದ ಅಳಿಯನ ತಲೆಗೆ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕಲಂ 302 ಭಾರತ ದಂಡ ಸಂಹಿತೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್‌ ರಾಜೇಶ್.ಎಂ.ಮಳಗಿಕರ್ ಅವರು ನ್ಯಾಯಾಲಯವು ಪ್ರಕರಣದ ವಿದ್ಯಮಾನಗಳನ್ನು ಮತ್ತು ಲಭ್ಯವಿದ್ದ ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ತಮ್ಮ ಸುದೀರ್ಘ ವಾದ ಮಂಡಿಸಿದರು. ಇದಕ್ಕೆ ಪೂರಕವಾಗಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸೀತಾರಾಮ ಅವರು ಸೂಕ್ತ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸಿದ್ದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಮಹೇಶ ನಾಯ್ಕ ಹಾಗೂ ಕಾನ್ಸಟೇಬಲ್ ಶಂಕರಾಚಾರಿ ಎನ್ ಅವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಚಿತವಾಗಿ ಪ್ರಕರಣದಲ್ಲಿ ಹಾಜರುಪಡಿಸಿ ಆರೋಪಿತನಿಗೆ ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ – ಏ.9ಕ್ಕೆ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

ಶಿರಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ಶಿರಸಿಯ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಪ್ರಕರಣದಲ್ಲಿರುವ ಸಾಕ್ಷ್ಯದಿಂದ ಆರೋಪಿತನ ವಿರುದ್ಧ ಆರೋಪವು ಸಾಬೀತಾಗಿದ್ದರಿಂದ ಅಪರಾಧದ ಕಲಂ, 302 ಐಪಿಸಿ ರ ಅಡಿಯ ಅಪರಾಧಕ್ಕೆ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ಹಾಗೂ ಮೃತನ ಹೆಂಡತಿಗೆ 50,000 ರೂ. ಪರಿಹಾರ ನೀಡುವಂತೆ, ಅಲ್ಲದೇ ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದು ಎಂದು ತೀರ್ಪು ನೀಡಿದ್ದಾರೆ.

Share This Article