ವೃದ್ಧನ ಜೊತೆ ಮದುವೆ ಮಾಡಲು ಅಪ್ರಾಪ್ತ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಿದ ತಂದೆ!

Public TV
1 Min Read

ಇಸ್ಲಾಮಾಬಾದ್:‌ ದಿನ ಬೆಳಗಾದರೆ ಪ್ರಪಂಚದ ಹಲವು ದೇಶಗಳಲ್ಲಿ ಚಿತ್ರ-ವಿಚಿತ್ರ ವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ವಿವಾಹಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಒಂದು ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ.

ಖೈಬರ್ ಪಖ್ತುಂಖ್ವಾದಲ್ಲಿ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು 72 ವರ್ಷದ ವ್ಯಕ್ತಿಗೆ ಮದುವೆ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮದುವೆ ನಿಲ್ಲಿಸಿ ವೃದ್ಧ ವರನನ್ನು ಬಂಧಿಸಿದ್ದಾರೆ.

ಬಾಲಕಿಯ ತಂದೆ ಆಲಂ ಸೈಯದ್ ತನ್ನ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ. ಅಲ್ಲದೇ ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡಲ್ಲ ಎಂದು ಬಾಲಕಿಯ ತಂದೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿ 72 ವರ್ಷದ ವರ ಹಬೀಬ್ ಖಾನ್ ಮತ್ತು ಮದುವೆಯನ್ನು ನಡೆಸಿದ ʼನಿಕಾಹ್ ಖ್ವಾನ್’ ಅನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಇದೆ- ಮೋದಿ ಭೇಟಿ ಬಳಿಕ ಕೆನಡಾ ಪ್ರಧಾನಿ ಹೇಳಿಕೆ

ವಿಚಾರ ತಿಳಿಯುತ್ತಿದಂತೆಯೇ ಬಾಲಕಿಯ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿಯ ತಂದೆ, 72 ವರ್ಷದ ವೃದ್ಧ ಹಾಗೂ ಮದುವೆ ಮಾಡಿದಾತನ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಾಲ್ಯವಿವಾಹದ ವಿರುದ್ಧ ಕಾನೂನುಗಳಿದ್ದರೂ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ, ರಾಜನ್‌ಪುರ ಮತ್ತು ಥಟ್ಟಾದಲ್ಲಿ ನಡೆದ ಇದೇ ರೀತಿಯ ಘಟನೆಗಳು ನಡೆದಿದ್ದವು. ರಾಜನ್‌ಪುರದಲ್ಲಿ 11 ವರ್ಷದ ಬಾಲಕಿಯ ವಿವಾಹವನ್ನು 40 ವರ್ಷದ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಗಿತ್ತು. ಆದರೆ ಪೊಲೀಸರು ಸಮಯಕ್ಕೆ ಸರಿಯಾಗಿ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಮೇ 6 ರಂದು 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 70 ವರ್ಷದ ವ್ಯಕ್ತಿಯನ್ನು ಸ್ವಾತ್‌ನಲ್ಲಿ ಪೊಲೀಸರು ಬಂಧಿಸಿದ್ದರು.

Share This Article