ಲಕ್ನೋ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿಂದಿನ ರಾತ್ರಿ ಅಪಘಾತದಲ್ಲಿ ವಿದ್ಯಾರ್ಥಿನಿಯ ತಂದೆ ಮತ್ತು ತಮ್ಮ ಇಬ್ಬರು ಮೃತಪಟ್ಟಿದ್ದಾರೆ. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆ ಮಾಡದೇ ಮರುದಿನ ಪರೀಕ್ಷೆ ಬರೆದು ವಿದ್ಯಾರ್ಥಿನಿ 92.4% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಟಿಯಾ ಸಿಂಗ್ ದುಃಖದಲ್ಲೂ ಪರೀಕ್ಷೆ ಬರೆದು 92.4% ಅಂಕ ಪಡೆಯುವ ಮೂಲಕ ಸುದ್ದಿಯಾಗಿದ್ದಾಳೆ. ಟಿಯಾ ಗೋವಿಂದಪುರದಲ್ಲಿನ ಬ್ರೈಟ್ಲ್ಯಾಂಡ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂಗ್ಲೀಷ್‍ನಲ್ಲಿ 99, ಸಮಾಜ 95, ಹಿಂದಿ 90, ಗಣಿತ ಮತ್ತು ವಿಜ್ಞಾನದಲ್ಲಿ 89 ಅಂಕ ಪಡೆದಿದ್ದಾಳೆ.
ನಡೆದಿದ್ದೇನು?
ಟಿಯಾ ಪರೀಕ್ಷೆಯ ಹಿಂದಿನ ದಿನ ಆಕೆಯ ಸಹೋದರನ ಫಲಿತಾಂಶ ಬಂದಿತ್ತು. ಆತ 5 ತರಗತಿಯಲ್ಲಿ 2ನೇ ಸ್ಥಾನ ಪಡೆದು ಪಾಸ್ ಆಗಿದ್ದನು. ಈ ಖುಷಿಯಲ್ಲಿ ಅಂದಿನ ರಾತ್ರಿ ಡಾಬಾದಲ್ಲಿ ಊಟ ಮಾಡಲು ಕುಟುಂಬ ಸಮೇತರಾಗಿ ಮೋಟಾರ್ ಬೈಕಿನಲ್ಲಿ ಹೋಗಿದ್ದರು. ಆದರೆ ರಾತ್ರಿ ಸುಮಾರು 9.30ಕ್ಕೆ ಶಾಸ್ತ್ರಿನಗರ ಸಮೀಪ ಬೈಕ್‍ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಸಹೋದರನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಹೋದರನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರಿಂದ ಟಿಯಾ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಮರುದಿನ ಟಿಯಾ ಮೊದಲ ಪರೀಕ್ಷೆ ಆರಂಭವಾಗಿತ್ತು. ಕಣ್ಣ ಮುಂದೆಯೇ ಅಪ್ಪ ಮತ್ತು ತಮ್ಮನನ್ನು ಕಳೆದುಕೊಂಡ ಟಿಯಾ ದುಃಖದಲ್ಲಿ ಮುಳುಗಿದ್ದಳು.
ಮುಂಜಾನೆ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ತಯಾರಿ ನಡೆಸುತ್ತಿದ್ದರೆ ಟಿಯಾ ಪರೀಕ್ಷೆ ಬರೆಯಲು ಸಿದ್ಧಳಾಗಿ ಶಾಲೆಗೆ ಹೋಗಿದ್ದಳು. ಪರೀಕ್ಷೆ ಬರೆದು ವಾಪಸ್ ಬಂದ ಬಳಿಕ ತಂದೆ- ತಮ್ಮನ ಅಂತಿಮ ಸಂಸ್ಕಾರದಲ್ಲಿ ಟಿಯಾ ಪಾಲ್ಗೊಂಡಿದ್ದಳು. ನಂತರ ದುಃಖದಲ್ಲಿಯೇ ಎಲ್ಲ ಪರೀಕ್ಷೆಗಳನ್ನು ಬರೆದಿದ್ದಾಳೆ. ಈಗ 92.4% ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ತನ್ನ ತಂದೆಯ ಕನಸನ್ನು ನನಸಾಗಿಸಲು ಟಿಯಾ ನೋವಿನಲ್ಲಿಯೂ ಪರೀಕ್ಷೆ ಬರೆದಿದ್ದಾಳೆ. ಮಗಳು ಡಾಕ್ಟರ್ ಆಗಬೇಕು ಎಂದು ನಾನು ಇಷ್ಟಪಟ್ಟಿದ್ದೇನೆ. ನಮ್ಮ ಸಂಬಂಧಿಕರು ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ. ಹಾಗಾಗಿ ನನ್ನ ಪತಿ ಮಗಳನ್ನು ಡಾಕ್ಟರ್ ಓದಿಸಬೇಕೆಂದು ಬಯಸಿದ್ದರು. ಅವಳ ಸಾಧನೆ ನಿಜಕ್ಕೂ ಸಂತೋಷ ತಂದಿದೆ ಎಂದು ಟಿಯಾ ತಾಯಿ ರೀನಾ ಸಾಗರ್ ತಿಳಿಸಿದ್ದಾರೆ.
ನನ್ನ ಸಹೋದರ ಜೊತೆ ಮಾಡುತ್ತಿದ್ದ ಜಗಳವೇ ನೆನಪಾಗುತ್ತಿದೆ. ಅವನು ನನ್ನನ್ನು ಬಹಳ ಪ್ರೀತಿಸುತ್ತಿದ್ದನು. ನನ್ನ ಫಲಿತಾಂಶವನ್ನು ನೋಡಿ ತಂದೆ ಖುಷಿ ಪಡುತ್ತಿದ್ದರು. ಆದರೆ ಅಪಘಾತದಿಂದ ಅವರನ್ನು ನಾನು ಕಳೆದುಕೊಂಡೆ. ಅಪ್ಪನ ಕನಸನ್ನು ನನಸು ಮಾಡುವುದೇ ನನ್ನ ಗುರಿ ಎಂದು ಟಿಯಾ ಹೇಳಿದ್ದಾಳೆ.
ಟಿಯಾ ಶಾಲಾ ಆಡಳಿತ ಮಂಡಳಿ, ಆಕೆಯ ತಾಯಿಗೆ ಶಿಕ್ಷಕಿ ಹುದ್ದೆ ಆಫರ್ ನೀಡಿದೆ. ಜೊತೆಗೆ ಅವರ ಕುಟುಂಬಕ್ಕೆ ಬೆಂಬಲವಾಗಿರುತ್ತೇವೆ ಎಂದು ಅಭಯ ನೀಡಿದೆ.