ಮೈಸೂರು: ಗೂಡ್ಸ್ ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ – ಮಗ ಮೃತಪಟ್ಟಿರುವ ಘಟನೆ ನಗರದ ಬನ್ನೂರಿನ ತುರಗನೂರು ಬಳಿ ನಡೆದಿದೆ.
ಅಪಘಾತದಲ್ಲಿ ಮಗ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ಸಿದ್ದಶೆಟ್ಟಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ. ಮೃತರನ್ನು ಬನ್ನೂರಿನ ಬಾಣಗವಾಡಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಸಿದ್ದಶೆಟ್ಟಿ ಮತ್ತು ಮಗ ಮಹೇಂದ್ರ ಇಬ್ಬರೂ ಬೈಕಿನಲ್ಲಿ ಬನ್ನೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದರು. ಗೂಡ್ಸ್ ಆಟೋ ಮೈಸೂರಿನಿಂದ ಬನ್ನೂರಿನ ಕಡೆಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ತುರಗನೂರು ಬಳಿ ಒಂದು ತಿರುವಿನಲ್ಲಿ ಆಟೋ ಮತ್ತು ಬೈಕ್ ವೇಗವಾಗಿ ಬಂದು ಎರಡೂ ಮುಖಾಮುಖಿ ಡಿಕ್ಕಿ ಹೊಡೆದಿವೆ.
ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಶೆಟ್ಟಿಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.