ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

Public TV
1 Min Read

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ (Rave Party) ಪ್ರಕರಣದ ತನಿಖೆ ಚುರುಕುಗೊಂಡಿದೆ.

ಬಂಧಿತರ ಐವರು ಆರೋಪಿಗಳ ಅಕೌಂಟ್‍ನಲ್ಲಿದ್ದ ಹಣವನ್ನು ಸಿಸಿಬಿ ಪೊಲೀಸರು (CCB Police) ಸೀಜ್ ಮಾಡಿದ್ದಾರೆ. ಆರೋಪಿಗಳ ಅಕೌಂಟ್‍ನಲ್ಲಿ ಲಕ್ಷಲಕ್ಷ ಹಣ ಪತ್ತೆಯಾಗಿತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಎಲ್ಲಾ ಅಕೌಂಟ್‍ಗಳನ್ನ ಫ್ರೀಜ್ ಮಾಡಿಸಿದ್ದಾರೆ. ಅಲ್ಲದೆ ಆರೋಪಿಗಳ ಮೊಬೈಲ್ ಮಿರರ್ ಇಮೇಜ್ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಬೇರೆ ಎಲ್ಲೆಲ್ಲಿ ರೇವ್ ಪಾರ್ಟಿ ಮಾಡಿಸಿದ್ರು..? ಯಾರೆಲ್ಲ ಭಾಗಿಯಾಗಿದ್ರು..?, ರೇವ್ ಪಾರ್ಟಿಗೆ ಎಷ್ಟು ಹಣ ವಸೂಲಿ ಮಾಡ್ತಿದ್ರು..? ಡ್ರಗ್ಸ್ ಎಲ್ಲಿಂದ ಬರ್ತಿತ್ತು..?, ಎಲ್ಲ ಮಾಹಿತಿ ಪತ್ತೆ ಮಾಡಲು ಮೊಬೈಲ್ ಮಿರರ್ ಇಮೇಜಿಂಗ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಐವರು ಆರೋಪಿಗಳನ್ನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಕೂಡ ತಯಾರಿ ನಡೆಯುತ್ತಿದೆ.

ಸೋಮವಾರ ಕೋರ್ಟ್ ಗೆ ಅರ್ಜಿ ಹಾಕಿ ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಸಿಸಿಬಿ ಹಾಗೂ ಆರೋಪಿಗಳ ವಿಚಾರಣೆ ಬಳಿಕ ನಟಿ ಹೇಮ ಸೆರಿದಂತೆ ಪಾರ್ಟಿಯಲ್ಲಿದ್ದವರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ.

ವಾಸು ಎಂಬಾತನ ಹುಟ್ಟುಹಬ್ಬದ ಅಂಗವಾಗಿ Sunset To Sun Rise victory ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು ಎನ್ನಲಾಗಿದೆ. ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಿರುವ ಸುಳಿವು ಸಿಕ್ಕಿದೆ. ಎಂಡಿಎಂಎ, ಕೊಕೇನ್, ಹೈಡೋಗಾಂಜಾ ಪತ್ತೆಯಾಗಿತ್ತು.

ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ತೆಲುಗು ಕಿರುತೆರೆ ನಟಿ ಹೇಮಾ(ಕೃಷ್ಣವೇಣಿ) ಪಾಲ್ಗೊಂಡಿರುವುದು ಕೂಡ ಬಯಲಾಗಿತ್ತು.

Share This Article