ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ, ಸಾವಿರಾರು ಟನ್‌ ಕಬ್ಬು ಭಸ್ಮ!

Public TV
1 Min Read

– ಕಬ್ಬು ಬೆಳೆಗೆ ಬೆಂಕಿ ಹಚ್ಚಿ ಕಣ್ಣೀರಿಟ್ಟ ರೈತರು

ಬಾಗಲಕೋಟೆ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ಬಾಗಲಕೋಟೆಯ ಮುಧೋಳದ ಮಾಹಾಲಿಂಗಪುರ ಪಟ್ಟಣ ಬಳಿಯ ಸಂಗಾನಟ್ಟಿ ಕ್ರಾಸ್ ಬಳಿ ಕಬ್ಬಿನ ಟ್ರ‍್ಯಾಕ್ಟರ್ ಟ್ರೇಲರ್ ಪಲ್ಟಿ ಮಾಡಿ ಕಬ್ಬಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ಸಾವಿರಾರು ಟನ್‌ ಕಬ್ಬು ಬೆಳೆ ಭಸ್ಮವಾಗಿದೆ.

ಆರಂಭದಲ್ಲಿ ನಿಪ್ಪಾಣಿ- ಮಹಾಲಿಂಗಪುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿ ಟನ್ ಕಬ್ಬಿಗೆ 3,500 ರೂ. ಕೊಡಬೇಕೆಂದು ಆಗ್ರಹಿಸಿದ್ದ ರೈತರು, ಸೈದಾಪುರ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆ ಬಳಿಕ ತಾಳ್ಮೆ ಕಳೆದುಕೊಂಡ ರೈತರು ಮಹಲಿಂಗಪುರ-ನಿಪ್ಪಾಣಿ ರಸ್ತೆಯಲ್ಲಿರುವ ಸೈದಾಪುರ ಸಕ್ಕರೆ ಕಾರ್ಖಾನೆ ಅವರಣದಲ್ಲಿನ ಕಬ್ಬು ತುಂಬಿದ ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. 50ಕ್ಕೂ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಕಣ್ಣೀರಿಟ್ಟಿದ್ದಾರೆ. ಇದರಿಂದ ಸಾವಿರಾರು ಟನ್‌ ಕಬ್ಬು ಸುಟ್ಟು ಭಸ್ಮವಾಗಿದೆ. ಸ್ಥಳದಲ್ಲಿ 200ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನ ನಿಲ್ಲಿಸಲಾಗಿತ್ತು.

ಇನ್ನೂ ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆಯ ವೇಳೆ ಕಲ್ಲು ತೂರಿದ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ನವೆಂಬರ್ 7ರಂದು ಘಟನೆ ನಡೆದಿತ್ತು. ರೈತರ ಹೋರಾಟದಲ್ಲಿ ಕಿಡಿಗೇಡಿಗಳು ಸೇರಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ಕೆಲವರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ ಕಲ್ಲು ತೂರಾಟ ಆಗಿತ್ತು. ಈ ವೇಳೆ ಡಿವೈಎಸ್ಪಿ ಮಹಾಂತೇಶ್ ಸಜ್ಜನ್ ಸೇರಿ 12 ಪೊಲೀಸ್ ಸಿಬ್ಬಂದಿಗೆ ಗಾಯಗೊಂಡಿದ್ರು.

ಆರೋಪಿಗಳ ವಿರುದ್ಧ ದೊಂಬಿ, ಗುಂಪು ಗಲಭೆ, ಮಾರಣಾಂತಿಕ ಹಲ್ಲೆ ಪ್ರಕರಣದಡಿ ಕೇಸ್ ದಾಖಲಾಗಿದೆ. ಇತ್ತ, ನ.6ರಂದು ಬಿಡದಿ ಟೌನ್‌ಶಿಪ್ ವಿರುದ್ಧ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ 9 ರೈತರ ಮೇಲೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Share This Article