ಪ್ರತಿಭಟನೆ ವೇಳೆ ಅಶ್ರುವಾಯು, ಜಲ ಫಿರಂಗಿ ಬಳಕೆ; 17 ಮಂದಿ ರೈತರಿಗೆ ಗಾಯ

Public TV
1 Min Read

ನವದೆಹಲಿ: ಹರಿಯಾಣ ಮತ್ತು ಪಂಜಾಬ್ ನಡುವಿನ ಶಂಭು ಗಡಿಯಲ್ಲಿ ದೆಹಲಿ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ರೈತರ ಮೇಲೆ ಪೋಲಿಸರು ಅಶ್ರುವಾಯು ಮತ್ತು ಜಲ ಫಿರಂಗಿ ಬಳಿಸಿದ್ದು, ಘಟನೆಯಲ್ಲಿ 17 ಮಂದಿ ರೈತರು ಗಾಯಗೊಂಡಿದ್ದಾರೆ. ಘಟನೆ ಬಳಿಕ ರೈತರು ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಪ್ರತಿಭಟನಾನಿರತ ರೈತರು, ರಾಜಧಾನಿಯನ್ನು ಪ್ರವೇಶಿಸಲು ಇಂದು ಮೂರನೇ ಬಾರಿಗೆ ಪ್ರಯತ್ನಿಸಿದರು‌. ಮಧ್ಯಾಹ್ನ 12 ಗಂಟೆಗೆ ಹೋರಾಟ ಪ್ರಾರಂಭವಾದ ಬೆನ್ನಲೆ, ಹರಿಯಾಣ ಪೊಲೀಸರು ರೈತರ ಮೇಲೆ ಅಶ್ರುವಾಯು,‌ ಜಲ ಫಿರಂಗಿ ಪ್ರಯೋಗಿಸಿದರು.

ಹರಿಯಾಣ ಪೊಲೀಸರು ಭಾರಿ ಅಶ್ರುವಾಯು ನಡೆಸಿದರು. ಈ ಹಿನ್ನೆಲೆ ಇಂದಿನ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಆಂತರಿಕ ಸಭೆಯ ನಂತರ ನಾವು ನಮ್ಮ ಮುಂದಿನ ಕಾರ್ಯಕ್ರಮವನ್ನು ಘೋಷಿಸುತ್ತೇವೆ ಎಂದು ರೈತ ಮುಖಂಡ ತೇಜ್ವೀರ್ ಸಿಂಗ್ ತಿಳಿಸಿದ್ದಾರೆ. ದೆಹಲಿಯತ್ತ ಮೆರವಣಿಗೆ ನಡೆಸಲು ರೈತರಿಗೆ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರದ ದ್ವಿಮುಖ ವರ್ತನೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ ಆರೋಪಿಸಿದರು. ಒಂದೆಡೆ ಸರ್ಕಾರ ರೈತರನ್ನು ನಾವು ತಡೆಯುತ್ತಿಲ್ಲ ಎಂದು ಹೇಳುತ್ತಿದೆ. ಇನ್ನೊಂದು ಕಡೆ ಅಶ್ರುವಾಯು ಪ್ರಯೋಗಿಸುತ್ತಿದ್ದಾರೆ. ಇದನ್ನು ಪಾಕಿಸ್ತಾನದ ಗಡಿ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ. ರೈತರು ತಮ್ಮ ಬೆಳೆಗಳಿಗೆ ಎಂಎಸ್‌ಪಿಯನ್ನು ಮಾತ್ರ ಬಯಸುತ್ತಾರೆ. ನಾವು ಯಾವಾಗಲೂ ರೈತರಿಗೆ ಬೆಂಬಲ ನೀಡುತ್ತೇವೆ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಬೇಕು ಎಂದು ಅವರು ಅಗ್ರಹಿಸಿದರು.

ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅಂಬಾಲಾದ ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಡಿ.14 ರಂದು ಬೆಳಗ್ಗೆ 6 ರಿಂದ ಡಿ.17 ರವರೆಗೆ ಸ್ಥಗಿತಗೊಳಿಸಲಾಗಿದೆ. ಫೆಬ್ರುವರಿ 13 ರಿಂದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈವರೆಗೂ ಮೂರು ಬಾರಿ ದೆಹಲಿ ಗಡಿ ಪ್ರವೇಶಕ್ಕೆ ಯತ್ನ ನಡೆದಿದೆ.

Share This Article