ಆಪರೇಷನ್ ಕಮಲ ಟೈಂನಲ್ಲಿ ದಿನಕ್ಕೆ ರೂಂ ಬಾಡಿಗೆ ಎರಡೂವರೆ ಲಕ್ಷ – ಮಗಳ ಮದ್ವೆಗೆ 10 ಕೋಟಿ..!

Public TV
2 Min Read

– ಕಬ್ಬು ಬಾಕಿ ಪಾವತಿಗೆ ಸಾಹುಕಾರನ ಬಳಿ ಕಾಸಿಲ್ವಾ..?

ಬೆಳಗಾವಿ: ಸುಮಾರು ಒಂದೂವರೆ ತಿಂಗಳು ಕ್ಷೇತ್ರದ ಜನರನ್ನ ಮರೆತು ಮುಂಬೈನಲ್ಲಿ ಐಷಾರಾಮಿ ಹೋಟೆಲ್‍ನಲ್ಲಿ ತಂಗಿದ್ದ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಶೀಘ್ರದಲ್ಲೇ ಮಗಳ ಮದುವೆ ಮಾಡಲು ಹೊರಟಿದ್ದಾರೆ. ಆದ್ರೆ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿರುವ ರೈತರಿಗೆ ಕೊಡಬೇಕಾದ ಕಬ್ಬು ಬೆಳೆ ಬಾಕಿ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹೀಗಾಗಿ ಶಾಸಕರ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಬೆಳಗಾವಿ ಪ್ರಭಾವಿ ಹಾಗೂ ಶ್ರೀಮಂತ ಶಾಸಕ ರಮೇಶ್ ಜಾರಕಿಹೊಳಿ ಅವರು ಸುಮಾರು 10ಕೋಟಿವರೆಗೆ ಖರ್ಚು ಮಾಡಿ ಶೀಘ್ರದಲ್ಲಿ ತಮ್ಮ ಮಗಳ ಮದುವೆ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಸಿದ್ಧತೆನೂ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ತಮ್ಮ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ 2014-15ರಲ್ಲಿ ರೈತರಿಗೆ ನೀಡಬೇಕಾದ ಕೇವಲ 5ಕೋಟಿ ಹಣ ಕೊಡಲು ಹಿಂದೆ-ಮುಂದೆ ನೋಡುತ್ತಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಮ್ಮ ಮಗಳಿಗೆ ಕೋಟಿ ಕೋಟಿ ಖರ್ಚು ಮಾಡಲು ಹೊರಟಿರುವ ಶಾಸಕರಿಗೆ ನಮ್ಮ ಬಾಕಿ ಕೊಡಲು ಏನು ಸಮಸ್ಯೆ. ಶಾಸಕರು ಕೂಡಲೇ ನಮ್ಮ ಬಾಕಿ ಹಣ ಪಾವತಿಸಬೇಕು, ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೈತರು ತಮ್ಮ ಹಣಕ್ಕಾಗಿ 15 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ರು. ಈ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ರೈತರ ಪರವಾಗಿದ್ದೇವೆ ಎಂಬುದನ್ನ ತೋರಿಸಿಕೊಳ್ಳಲು ಬೈಲಹೊಂಡಲ ಎಸಿ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಎಷ್ಟು ಬಾಕಿ ಹಣ ಉಳಿಸಿಕೊಂಡಿದೆ ಎಂದು ವರದಿ ನೀಡುವಂತೆ ಸೂಚಿಸಿದ್ರು. ಈ ರೀತಿ ಸೂಚನೆ ನೀಡಿ ಒಂದು ತಿಂಗಳು ಕಳೆಯುತ್ತಾ ಬಂದ್ರೂ ಇಲ್ಲಿವರೆಗೂ ವರದಿ ಮಾತ್ರ ಡಿಸಿ ಕೈಗೆ ಸೇರಿಲ್ಲ. ಈಗಾಗಲೇ ರೈತರೆಲ್ಲರೂ ಜಿಲ್ಲಾಧಿಕಾರಿ ಬಳಿ ಬಂದು ತಮಗೆ ಬರಬೇಕಾದ ಹಣ ಎಷ್ಟು ಯಾವ ವರ್ಷದ ಬಾಕಿ ಹಣ ಬರಬೇಕೆಂಬುದು ಸೇರಿದಂತೆ ಬಿಲ್ ಸಮೇತ ಎಲ್ಲಾ ದಾಖಲೆಗಳನ್ನ ಸಲ್ಲಿಸಿದ್ದಾರೆ. ಇಷ್ಟಾದ್ರೂ ಡಿಸಿ ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಶಾಸಕರ ಬೆನ್ನಿಗೆ ನಿಂತು ಇನ್ನೂ ವರದಿ ಬಂದಿಲ್ಲ ಅಂತಾ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಮ್ಮನ್ನ ಆಯ್ಕೆ ಮಾಡಿದ ಕ್ಷೇತ್ರದ ಜನರನ್ನ ಮರೆತು ಒಂದೂವರೆ ತಿಂಗಳು ದಿನಕ್ಕೆ ಎರಡೂವರೆ ಲಕ್ಷದಂತೆ ಸುಮಾರು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿಕೊಂಡು ಶಾಸಕರು ಮುಂಬೈ ಐಷಾರಾಮಿ ಹೋಟೆಲ್‍ನಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಕೋಟಿ ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಲು ಹೊರಟಿರುವ ಶಾಸಕರು ರೈತರ ಬಾಕಿ ಹಣ ಪಾವತಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *