ರೈತರ ಪ್ರತಿಭಟನೆ; ಹರಿಯಾಣದಲ್ಲಿ ಡಿ.17 ರ ವರೆಗೆ ಇಂಟರ್ನೆಟ್‌ ಸೇವೆ ಸ್ಥಗಿತ

Public TV
1 Min Read

ಚಂಡೀಗಢ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಅಂಬಾಲಾ ಜಿಲ್ಲೆಯ 12 ಹಳ್ಳಿಗಳಲ್ಲಿ ಇಂಟರ್ನೆಟ್‌ ಮತ್ತು SMS ಸೇವೆಗಳನ್ನು ಸ್ಥಗಿತಗೊಳಿಸಿದೆ.

ಶಂಭು ಗಡಿಯಿಂದ ದೆಹಲಿಗೆ ರೈತರು ಪ್ರತಿಭಟನಾ ಮೆರವಣಿಗೆ ಹೊರಡಲು ಸಜ್ಜಾಗಿದ್ದಾರೆ. ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಹರಿಯಾಣ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇಂದಿನಿಂದ ಡಿ.17 ರ ವರೆಗೂ ಇಂಟರ್ನೆಟ್‌ ಸೇವೆ ಸ್ಥಗಿತ ಮುಂದುವರಿಯಲಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸುಮಿತಾ ಮಿಶ್ರಾ ತಿಳಿಸಿದ್ದಾರೆ. 101 ರೈತರ ಗುಂಪು ಇಂದು ಮಧ್ಯಾಹ್ನ ಶಂಭು ಗಡಿಯಿಂದ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲು ಯೋಜಿಸಿದೆ.

ದಂಗ್‌ದೇರಿ, ಲೆಹ್‌ಗರ್, ಮನಕ್‌ಪುರ್, ದಡಿಯಾನಾ, ಬರಿ ಘೇಲ್, ಚೋಟಿ ಘೇಲ್, ಲಾರ್ಸಾ, ಕಲು ಮಜ್ರಾ, ದೇವಿ ನಗರ (ಹೀರಾ ನಗರ, ನರೇಶ್ ವಿಹಾರ್), ಸದ್ದೋಪುರ್, ಸುಲ್ತಾನ್‌ಪುರ್ ಮತ್ತು ಅಂಬಾಲಾದ ಕಕ್ರು ಸೇರಿವೆ. ಸೇವೆಗಳ ಅಮಾನತು ಯಾವುದೇ ಸಾರ್ವಜನಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article