ಗದಗ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ರೈತೆರು ಎತ್ತು, ಚಕ್ಕಡಿಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆ ಮುಂಡರಗಿ (Mudaragi) ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಎತ್ತು, ಚಕ್ಕಡಿಗಳನ್ನು ನಿಲ್ಲಿಸಿ ರೈತರು ಪ್ರತಿಭಟನೆ ಮಾಡಿದರು. ಹೆಸರು, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳು ಮಳೆಯಿಂದ ನಾಶವಾಗಿವೆ. ರೈತರು (Farmers) ಸಾಕಷ್ಟು ಸಾಲ ಮಾಡಿ ಬೆಳೆದ ಬೆಳೆಗಳು ಕೈತಪ್ಪಿವೆ. ಅನ್ನದಾತರು ಬೀದಿಗೆ ಬರುವಂತಾಗಿದೆ. ಇನ್ನು ಅಲ್ಪ ಸ್ವಲ್ಪ ಬೆಳೆಗೆ ಖರೀದಿ ಕೇಂದ್ರ ಇಲ್ಲ. ಶೀಘ್ರದಲ್ಲೇ ಖರೀದಿ ಕೇಂದ್ರ ಆರಂಭಿಸಬೇಕು. ಬೆಳೆ ವಿಮೆ ಏಜೆಂಟ್‌ಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಾವೇರಿ | ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಬರ್ಬರ ಹತ್ಯೆ – ಲಾಂಗ್‌ಡ್ರೈವ್ ಹೋಗಿ ಬರುತ್ತೇನೆ ಅಂದಾತ ಶವವಾಗಿ ಪತ್ತೆ
ಈ ವೇಳೆ ಕೃಷಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಧಿಕಾರಿಗಳು ಸರಿಯಾಗಿ ರೈತರ ಬೆಳೆ ಸಮೀಕ್ಷೆ ಮಾಡುತ್ತಿಲ್ಲ. ಕಾಟಾಚಾರಕ್ಕೆ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮೈಸೂರಿನ ಮಧುಸೂದನ್‌ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ – ಸೆ.5ರಂದು ರಾಷ್ಟ್ರಪತಿಗಳಿಂದ ಪ್ರದಾನ
ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಕೃಷಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಕೆಲಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಪ್ರತಿಭಟನೆಯಲ್ಲಿ ರೈತ ಮುಖಂಡರು, ಮಹಿಳೆಯರು, ಸಾರ್ವಜನಿಕರು ಭಾಗಿಯಾಗಿದ್ದರು.