ಆನೇಕಲ್: ಆನೇಕಲ್ ಸುತ್ತಮುತ್ತಲು ಹಲವು ಕೈಗಾರಿಕಾ ಪ್ರದೇಶಗಳಿದ್ದರೂ, ಇದೀಗ ಮತ್ತೊಮ್ಮೆ ಕೈಗಾರಿಕೆಗಳಿಗಾಗಿ 2,000 ಎಕರೆ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿರುವುದನ್ನ ವಿರೋಧಿಸಿ ಆನೇಕಲ್‌ನಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
KIADB ಭೂ ಸ್ವಾಧೀನದ ವಿರುದ್ಧ ಸಿಡಿದೆದ್ದಿರುವ ರೈತರು, ನಮ್ಮ ಭೂಮಿ ನಮ್ಮ ಹಕ್ಕು ಎಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರ ಹಾಗೂ KIADB ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಈಗಾಗಲೇ ಐದಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದರೂ, ಇದೀಗ ಸ್ವೀಪ್ಟ್ ಸಿಟಿ ಹೆಸರಿನಲ್ಲಿ ಟೆಕ್ ಪಾರ್ಕ್ ನಿರ್ಮಾಣಕ್ಕಾಗಿ ಮೂರು ಹಂತಗಳಲ್ಲಿ 2000 ಎಕರೆ ಜಮೀನುಗಳಿಗೆ ನೋಟಿಸ್ ಜಾರಿ ಮಾಡಿರುವುದಕ್ಕೆ ರೊಚ್ಚಿಗೆದ್ದ ಅನ್ನದಾತ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಒಂದು ಕಾಲದಲ್ಲಿ ಆನೇಕಲ್ ತಾಲೂಕು ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಬೆಳೆಯುವ ಕಣಜವಾಗಿತ್ತು. ಅದರೆ ಈಗ ಇದೊಂದು ಕಾಂಕ್ರಿಟ್ ಕಾಡಾಗಿದೆ. KHB ವಸತಿ ಬಡಾವಣೆಗಳ ಹೆಸರಿನಲ್ಲಿ ಸಾವಿರಾರು ಎಕರೆ ಸ್ವಾಧೀನಪಡಿಸಿಕೊಂಡಿದ್ದರೂ ಅಳಿದುಳಿದ ತುಂಡು ಭೂಮಿಗಳನ್ನ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ಮಣ್ಣಿನ ಮಗ ಸಿಡಿದೆದ್ದು, ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮತ್ತು ರೈತರ ನಡುವೆ ಜಟಾಪಟಿ ನಡೆಯಿತು. ಸರ್ಕಾರದ ಭೂಸ್ವಾಧೀನ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.