ಹೈನುಗಾರಿಕೆ ಉತ್ತೇಜನಕ್ಕಾಗಿ ಜಾತ್ರೆಯಲ್ಲಿ ಹಾಲು ಕರೆಯೋ ಸ್ಪರ್ಧೆ

Public TV
2 Min Read

ಧಾರವಾಡ: ತಾಲೂಕಿನ ಗರಗದ ಶ್ರೀ ಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಇಂದು ಹೈನುಗಾರಿಕೆಗೆ ಉತ್ತೇಜಿಸುವ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ಆಕಳು ಮತ್ತು ಎಮ್ಮೆಗಳ ಹಾಲು ಕರೆಯೋ ಸ್ಪರ್ಧೆಗೆ ಗರಗ, ಹಂಗರಕಿ, ತಡಕೋಡ, ಕಬ್ಬೇನೂರ ಮತ್ತಿತರ ಗ್ರಾಮಗಳ ರೈತರು, ಹೈನುಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೆಚ್.ಎಫ್. ಜರ್ಸಿ ಆಕಳುಗಳು ಹಾಗೂ ಮುರ್ರಾ ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ಜರುಗಿದವು. ಹಾಲು ಕರೆಯಲು ಅವುಗಳ ಮಾಲೀಕರಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಪ್ರತಿ ಜಾನುವಾರುಗಳ ಹಾಲು ಕರೆಯೋ ಸ್ಪರ್ಧೆ ಮೇಲ್ವಿಚಾರಣೆಗೆ ಓರ್ವ ಪಶುವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಂಬುನಾಥ್ ಗದ್ದಿ ಮಾತನಾಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಕೃಷಿಯ ಜೊತೆಗೆ ಉಪ ಕಸುಬುಗಳ ಮಹತ್ವ ತಿಳಿಸುವುದು ಮತ್ತು ನಿರುದ್ಯೋಗ ನಿವಾರಣೆಯ ಆಶಯದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸಲಾಗಿದೆ. ಜೊತೆಗೆ ಹೈನುಗಾರರಿಗೆ ಜಾನುವಾರುಗಳ ವೈಜ್ಞಾನಿಕ ಪೋಷಣೆಯ ವಿಧಾನಗಳು, ಸ್ವಚ್ಚತೆ, ಖನಿಜಾಂಶಯುಕ್ತ ಆಹಾರ ನೀಡಿಕೆ ಕುರಿತು ತಿಳುವಳಿಕೆ ನೀಡಲಾಗುತ್ತಿದೆ ಎಂದರು.

ಜರ್ಸಿ ತಳಿಯ ಆಕಳು ಹಾಲು ಹಿಂಡಿದವರಲ್ಲಿ ಪ್ರಥಮ ಬಹುಮಾನವನ್ನು ಕಬ್ಬೆನೂರ ಗ್ರಾಮದ ಮಹಾಂತೇಶಗೌಡ ಮುದಿಗೌಡ್ರ 13.580 ಕೆ.ಜಿ. ಹಾಲು ಕರೆಯೋ ಮೂಲಕ ಗೆದ್ದರು. ದ್ವಿತೀಯ ಬಹುಮಾನವನ್ನು ಗರಗ ಗ್ರಾಮದ ಸಿದ್ದಲಿಂಗ ಚಿಕ್ಕಮಠ 13.192 ಕೆ.ಜಿ. ಹಿಂಡಿ ಎರಡನೇ ಬಹುಮಾನ ಪಡೆದರೆ, ತೃತೀಯವಾಗಿ -ಹಂಗರಕಿ ಗ್ರಾಮದ ಪಾಲಾಕ್ಷಿಗೌಡ ನಾಗನಗೌಡ 12.416 ಕೆ.ಜಿ. ಹಾಲಿ ಕರೆಯೋ ಮೂಲಕ ಬಹುಮಾನ ಪಡೆದರು.

ಎಮ್ಮೆಗಳ ವಿಭಾಗದಲ್ಲಿ ಮುಮ್ಮಿ ಗಟ್ಟಿ ಗ್ರಾಮದ ಪ್ರಥಮ ಪ್ರಕಾಶಗೌಡ ಕರೆಕ್ಕನವರ 10.185 ಕೆ.ಜಿ. ಹಾಲು ಕರೆಯೋ ಮೂಲಕ ಪ್ರಥಮ ಬಹುಮಾನ ಪಡೆದರೆ, ಗರಗ ಗ್ರಾಮದ ಮಡಿವಾಳೆಪ್ಪ ತುರಕಾರ (9.021 ಕೆ.ಜಿ.) ದ್ವೀತಿಯ ಬಹುಮಾನ ಪಡೆದರು. ಇನ್ನು ಧಾರವಾಡದ ಪ್ರವೀಣ ಘಾಟಗೆ(8.051 ಕೆ.ಜಿ.) ತೃತೀಯ ಬಹುಮಾನ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *