ರಾಯಚೂರಲ್ಲಿ ಕಳೆಕಟ್ಟಿದ ಕಾರಹುಣ್ಣಿಮೆ ಸಂಭ್ರಮ..!

Public TV
1 Min Read

ರಾಯಚೂರು: ಮುಂಗಾರು ಸಾಂಸ್ಕೃತಿಕ ಹಬ್ಬ ಕಾರಹುಣ್ಣಿಮೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾರಹುಣ್ಣಿಮೆ ನಿಮಿತ್ಯ ಜೋಡೆತ್ತುಗಳಿಗೆ ಆಯೋಜಿಸಿದ್ದ ಸ್ಪರ್ಧೆ ಹಬ್ಬದ ಸಂಭ್ರಮಕ್ಕೆ ಕಳೆಕಟ್ಟಿತ್ತು.

ಜಿಲ್ಲೆಯಾದ್ಯಂತ ಕಾರಹುಣ್ಣಿಮೆ ಮುಂಗಾರು ಸಾಂಸ್ಕೃತಿಕ  ಹಬ್ಬದ ಸಂಭ್ರಮ ಮನೆ ಮಾಡಿದೆ. ಮುನ್ನೂರು ಕಾಪು ಸಮಾಜದವರು ಆಚರಿಸುವ ಮುಂಗಾರು ಹಬ್ಬದಿಂದ ನಗರದಲ್ಲಿ ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿತ್ತು.

ಜೂನ್ 27 ರಿಂದ 29ರ ವರೆಗೆ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಒಟ್ಟಿನಲ್ಲಿ ಕಾರ ಹುಣ್ಣಿಮೆ ಬಳಿಕ ಬರುವ ಮುಂಗಾರು ನಮ್ಮ ಕೈ ಹಿಡಿಯಲಿ ಎನ್ನುವುದು ಅನ್ನದಾತರ ಆಶಯ. ಇದು ಕೇವಲ ಜಿಲ್ಲೆಯ ಉತ್ಸವವಾಗದೆ ರಾಜ್ಯದ ಉತ್ಸವವಾಗಬೇಕು ಎನ್ನುವ ಉದ್ದೇಶದಿಂದ ವರ್ಷದಿಂದ ವರ್ಷಕ್ಕೆ ಅತೀ ಸಡಗರದಿಂದ ಆಚರಿಸಲಾಗುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕಾರಹುಣ್ಣಿಮೆಯನ್ನ ಮುಂಗಾರು ಹಬ್ಬವಾಗಿ ಸಡಗರದಿಂದ ಆಚರಿಸಲಾಗುತ್ತಿದೆ. ವರುಣದೇವ ರೈತರ ಮೇಲೆ ಕರುಣೆ ತೋರಲಿ ಅನ್ನೋದು ಹಬ್ಬದ ಉದ್ದೇಶ. ಆನೆ ಗಾತ್ರದ ಎತ್ತುಗಳು ಭಾರದ ಕಲ್ಲನ್ನ ಎಳೆಯುವ ಸ್ಪರ್ಧೆ ಈ ಹಬ್ಬಕ್ಕೆ ನಿಜವಾಗಿಯೂ ಕಳೆಕಟ್ಟುತ್ತದೆ.

ಒಂದೂವರೆ ಟನ್, ಎರಡು ಟನ್, ಎರಡು ವರೆ ಟನ್ ತೂಕದ ಕಲ್ಲುಗಳನ್ನು ಎಳೆಯುವ ಸ್ಪರ್ಧೆಯನ್ನು ಎತ್ತುಗಳಿಗೆ ಏರ್ಪಡಿಸಲಾಗಿದೆ. ಒಟ್ಟು 6 ಲಕ್ಷ ರೂಪಾಯಿಯ ಬಹುಮಾನಗಳನ್ನ ವಿಜೇತ ಎತ್ತಿನ ಜೋಡಿಗಳಿಗೆ ನೀಡಲಾಗುತ್ತೆ. ಈ ಬಾರಿ ಒಟ್ಟು 60 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

ಈ ಹಬ್ಬದ ನಿಮಿತ್ಯವಾಗಿ ಮೊದಲ ದಿನ ರಾಜ್ಯದ ಎತ್ತುಗಳ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 18 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪಶುಸಂಗೋಪನಾ ಸಚಿವರಾದ ವೆಂಕಟರಾವ್ ನಾಡಗೌಡ ರವರು ಉತ್ಸವಕ್ಕೆ ಚಾಲನೆ ನೀಡಿದರು.

 

ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸ್ಪರ್ಧೆಗೆ ಈ ಬಾರಿಯೂ ಬೃಹದಾಕಾರದ ಎತ್ತುಗಳು ಆಗಮಿಸಿದ್ದವು. ರಾಜ್ಯ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜೋಡಿ ಎತ್ತುಗಳ ಪೈಪೋಟಿ ನೋಡುಗರನ್ನ ಮೂಕವಿಸ್ಮಿತಗೊಳಿಸುತ್ತದೆ. ಮುಂಗಾರು ಸಾಂಸ್ಕೃತಿಕ ಹಬ್ಬ ವೀಕ್ಷಣೆಗೆ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಜನ ಆಗಮಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *