ವಿಧಾನಸಭೆಯಲ್ಲಿಂದು ಸಾಲಮನ್ನಾ ಚರ್ಚೆ – ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜು

Public TV
1 Min Read

ಬೆಂಗಳೂರು: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಇಂದು ವಿಧಾನಸಭೆ ಕಲಾಪದಲ್ಲಿ ರೈತರ ಸಾಲಮನ್ನಾ ವಿಚಾರದ ಕುರಿತು ಚರ್ಚೆ ನಡೆಯಲಿದೆ.

ಈ ವೇಳೆ ರೈತರ ಸಾಲಮನ್ನಾ ವಿಚಾರದಲ್ಲಿನ ಗೊಂದಲಗಳನ್ನಿಟ್ಟುಕೊಂಡೇ ದೋಸ್ತಿ ಸರ್ಕಾರದ ಮೇಲೆ ಬಿಜೆಪಿ ಪ್ರಹಾರಕ್ಕೆ ಸಜ್ಜಾಗಿದೆ. ಈ ವೇಳೆ ಸದನದಲ್ಲಿ ಕಾವೇರುವ ಚರ್ಚೆ ನಡೆಯಲಿದ್ದು, ಪರಸ್ಪರ ಕಾದಾಟ ಜೋರಾಗುವ ಸಾಧ್ಯತೆ ಇದೆ. ಜೊತೆಗೆ ಬರದ ಮೇಲಿನ ಚರ್ಚೆಗೆ ಇಂದು ಸರ್ಕಾರ ಉತ್ತರ ನೀಡಲಿದೆ. ಸರ್ಕಾರದಿಂದ ಸಮರ್ಪಕ ಉತ್ತರ ದೊರೆಯದಿದ್ದರೆ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಭಾತ್ಯಾಗ ಮಾಡುವ ಸಾಧ್ಯತೆಯೂ ಇದೆ.

ಇತ್ತ ಪರಿಷತ್‍ನಲ್ಲಿ ನಾಲ್ಕನೇ ದಿನವಾದ ಇಂದು ಬರದ ಬಗ್ಗೆ ಚರ್ಚೆ ನಡೆಯಲಿದೆ. ಮಂಗಳವಾರ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಮಯದ ಅಭಾವದಿಂದ ಚರ್ಚೆ ನಡೆದಿರಲಿಲ್ಲ. ಹೀಗಾಗಿ ಇಂದು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾದಿಯಾಗಿ ಬಿಜೆಪಿ ಸದಸ್ಯರು ನಿಯಮ 68 ರ ಅಡಿ ಚರ್ಚೆ ನಡೆಸಲಿದ್ದು, ಬರ ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆ ವಿರುದ್ಧ ವಿಪಕ್ಷ ತರಾಟೆಗೆ ತೆಗೆದುಕೊಳ್ಳಲಿದೆ.

ಅಲ್ಲದೇ ಮೂರು ದಿನಗಳ ಕಲಾಪದ ಬಳಿಕ ಇಂದು ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಪರಿಷತ್ ಗೆ ಆಗಮಿಸುತ್ತಿದ್ದು, ಎನ್.ಪಿ. ಎಸ್, ಕಾಲ್ಪನಿಕ ವೇತನ ಕುರಿತು ಉತ್ತರ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಸಿಎಂ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ.

ಎನ್ ಪಿಎಸ್ ವಿಚಾರವಾಗಿ ಸಿಎಂರಿಂದ ಉತ್ತರ ಕೊಡಿಸೋದಾಗಿ ಸಭಾ ನಾಯಕರು ಹೇಳಿದ್ರು. ಆದ್ರೆ ಸಿಎಂ ಉತ್ತರ ಕೊಡುವ ಮೊದಲೇ ಎನ್ ಪಿಎಸ್ ಸಂಬಂಧ ಸಮಿತಿ ರಚಿಸಿದ್ದು, ಈ ವಿಚಾರ ನಿನ್ನೆ ಸದನದಲ್ಲಿ ಪ್ರತಿಧ್ವನಿಸಿದೆ. ಹೀಗಾಗಿ ಇಂದು ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ, ನಿಯಮ 72, 330 ಅಡಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *