ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ

Public TV
2 Min Read

ಮಂಡ್ಯ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯಕ್ರಿಯೆ ಇಂದು ಹುಟ್ಟೂರು ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ನಡೆಯಲಿದೆ. ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆಗೆ ಕ್ಯಾತನಹಳ್ಳಿ ಗ್ರಾಮದಲ್ಲಿರುವ 9 ಎಕರೆ ತೆಂಗಿನತೋಟದಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಗ್ರಾಮಸ್ಥರೆಲ್ಲಾ ಸೇರಿ ಗುಂಡಿ ತೆಗೆಯುತ್ತಿದ್ದಾರೆ.

ಕ್ಯಾತನಹಳ್ಳಿ ಮೈದಾನದಿಂದ ಪಾರ್ಥಿವ ಶರೀರ ಬಂದ ನಂತರ ಅಂತ್ಯಕ್ರಿಯೆ ನಡೆಯಲಿದ್ದು, ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಅಂತ್ಯಕ್ರಿಯೆ ನಡೆಸಲಿದ್ದಾರೆ. ರೈತ ಮುಖಂಡರು 30 ಜಿಲ್ಲೆಗಳಿಂದ ಮಣ್ಣು ತಂದಿದ್ದಾರೆ ಎಂದು ಕ್ಯಾತನಹಳ್ಳಿಯಲ್ಲಿ ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ರೈತ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ.

ಸದ್ಯ ಕ್ಯಾತನಹಳ್ಳಿಯಲ್ಲಿರುವ ಪುಟ್ಟಣ್ಣಯ್ಯ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದೆ. ತಮ್ಮ ನೆಚ್ಚಿನ ಹೋರಾಟಗಾರನ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಬರುವವರಿಗೆ ಪುಟ್ಟಣ್ಣಯ್ಯ ಅಭಿಮಾನಿಗಳು ಕ್ಯಾತನಹಳ್ಳಿ ಸಂತೆ ಮೈದಾನದಲ್ಲಿ ತಿಂಡಿ-ಊಟದ ವ್ಯವಸ್ಥೆ ಮಾಡ್ತಿದ್ದಾರೆ. ಈ ಮೂಲಕವಾದ್ರೂ ಒಂದಷ್ಟು ಅನ್ನದ ಋಣ ತೀರಿಸ್ತೇವೆ ಅಂತಿದ್ದಾರೆ ಸುತ್ತಮುತ್ತಲಿನ ಹಳ್ಳಿಗಳ ರೈತರು.

ಮಕ್ಕಳು ಮತ್ತು ಕುಟುಂಬ ಆಗಮನ ವಿಳಂಬ ಹಿನ್ನೆಲೆಯಲ್ಲಿ ಪುಟ್ಟಣ್ಣಯ್ಯ ಅಂತ್ಯಕ್ರಿಯೆ ವಿಳಂಬವಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಪುಟ್ಟಣ್ಣಯ್ಯ ತಮ್ಮ ಲೇಟ್ ರಮೇಶ್ ಪತ್ನಿ ಸುಜಾತ, ಮಕ್ಕಳಾದ ಮನು, ಮೋಹನ್ ಆಗಮಿಸಿದ್ದಾರೆ. ಯುಎಸ್‍ಎಯಿಂದ ಪುಟ್ಟಣ್ಣಯ್ಯರ ಎರಡನೇ ಮಗಳ ಕುಟುಂಬ ಮಗಳು ಅಕ್ಷತಾ, ಅಳಿಯ ಶ್ರೀನಿವಾಸ್ ಬಂದಿದ್ದಾರೆ. ಕೆನಡಾದಿಂದ ಪುಟ್ಟಣ್ಣಯ್ಯ ಸಹೋದರಿ ರೇಣುಕಾ, ಮೊದಲ ಮಗಳು ಸ್ಮಿತಾ ಹಾಗೂ ಅಳಿಯ ಬಾಲು ಆಗಮಿಸಿದ್ದಾರೆ.

ಪುಟ್ಟಣ್ಣಯ್ಯ ಮೌಢ್ಯ ವಿರೋಧಿಯಾದ ಕಾರಣ ಯಾವುದೇ ವಿಧಿವಿಧಾನಗಳಿಲ್ಲದ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಂತರ ತೆಂಗಿನ ತೋಟದಲ್ಲಿ ಅವರ ತಂದೆ ಮತ್ತು ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಪುಟ್ಟಣ್ಣಯ್ಯ ಎಲ್ಲರನ್ನೂ ಸಮನವಾಗಿ ಕಾಣುತ್ತಿದ್ದರು. ಹೀಗಾಗಿ ಅವರ ಪಾರ್ಥಿವ ಶರೀರಕ್ಕೆ ದಲಿತ ಮಹಿಳೆಯಿಂದ ಮೊದಲಿಗೆ ಪೂಜೆ ನಡೆಯಲಿದೆ ಎಂದು ಪಬ್ಲಿಕ್ ಟಿವಿಗೆ ಪುಟ್ಟಣ್ಣಯ್ಯ ಪುತ್ರ ದರ್ಶನ್ ಹೇಳಿದ್ದಾರೆ.

ಇತ್ತ ಗಣ್ಯ ವ್ಯಕ್ತಿಗಳು ಮರಣದ ಬಳಿಕ ಶಾಲಾ ಕಾಲೇಜುಗಳಿಗೆ ರಜೆ ನೀಡೋದಕ್ಕೆ ಪುಟ್ಟಣ್ಣಯ್ಯ ವಿರೋಧಿಸ್ತಿದ್ರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿಲ್ಲ. ರಜೆ ನೀಡಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ ಅನ್ನೋ ನಿಲುವು ಹೊಂದಿದ್ದ ಪುಟ್ಟಣ್ಣಯ್ಯ ಅವರ ನಿಲುವನ್ನ ಗೌರವಿಸಿ ನಾವು ರಜೆ ನೀಡುವುದು ಬೇಡ ಅನ್ನೊ ನಿರ್ಧಾರಕ್ಕೆ ಬರಲಾಯ್ತು ಅಂತ ಜಿಲ್ಲಾಧಿಕಾರಿ ಮಂಜುಳಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *