ಪರಿಹಾರಕ್ಕಾಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ಜೋತು ಬಿದ್ದ ರೈತರು

Public TV
1 Min Read

ಅನಂತಪುರ: ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಹೈಟೆನ್ಷನ್ ವಿದ್ಯುತ್ ವಯರ್‍ಗೆ ಜೋತು ಬಿದ್ದ ಪ್ರತಿಭಟನೆ ನಡೆಸಿದ ಘಟನೆ ಆಂಧ್ರದ ಅನಂತಪುರದ ಮಡಕಶಿರಾ ತಾಲೂಕಿನ ಮಳವಾಯಿ ಗ್ರಾಮದಲ್ಲಿ ನಡೆದಿದೆ.

ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡಲು ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಹೈಟೆನ್ಷನ್ ವಿದ್ಯುತ್ ಕಂಬ ಆಳವಡಿಕೆ ಕಾಮಗಾರಿಗೆ ರೈತರು ಅಡ್ಡಿಪಡಿಸಿ ಹೈಟೆನ್ಷನ್ ವಯರ್‍ಗೆ ಜೋತು ಬೀಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಹುನ್ನಾರ ಸಾಬ್ ಹಾಗೂ ಅವರ ಮಗ ನಬೀರ್ ವಯರ್ ಹಿಡಿದು ಪ್ರತಿಭಟನೆ ನಡೆಸಿದವರು. ಪಾವಗಡದಿಂದ ಮಧುಗಿರಿಗೆ 220 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರ ಜಮೀನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹುನ್ನಾರ್ ಸಾಬ್ ಎಂಬವರ ಒಂದು ಎಕರೆ ಜಮೀನಿನಲ್ಲಿ ಲೈನ್ ಹಾದು ಹೋಗಿದೆ. ಇದಕ್ಕಾಗಿ ಸರ್ಕಾರ 90 ಸಾವಿರ ರೂ. ಪರಿಹಾರ ನೀಡಿದೆ.

ಜಮೀನು ಸಂಪೂರ್ಣವಾಗಿ ವಿದ್ಯುತ್ ಲೈನ್ ಆವರಿಸಿಕೊಂಡಿದ್ದು ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಇದರಿಂದ ಜಮೀನಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಕಾಮಗಾರಿ ತಡೆದು ಹುನ್ನಾರ್ ಸಾಬ್ ಮತ್ತು ಅವರ ಮಗ ನಬೀರ್ ಪ್ರತಿಭಟಿಸಿದ್ದಾರೆ. ಹುನ್ನಾರ್ ಸಾಬ್ ಅವರು ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ಮಂಡಲದ ನೆಲವಾಯಿಲು ಗ್ರಾಮದ ನಿವಾಸಿಗಳಗಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ಲೈನ್ ಮೇಲೆ ಎಳೆದಿದ್ದರಿಂದ ಹುನ್ನಾರ್ ಸಾಬ್ 50 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಹುನ್ನಾರ್ ಸಾಬ್ ಅವರಿಗೆ ಬೆನ್ನು ಮೂಳೆ ಮುರಿದಿದೆ. ಹುನ್ನಾರ್ ಸಾಬ್‍ರನ್ನು ಆಸ್ಪತ್ರೆಗೂ ಸೇರಿಸದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಮಾನವೀಯತೆ ತೋರಿದ್ದಾರೆ. ಹುನ್ನಾರ್ ಸಾಬ್ ಇದೀಗ ಮಡಕಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *