ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

Public TV
2 Min Read

ರಾಯಚೂರು: ಜಿಲ್ಲೆಯ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಪ್ರತೀ ವರ್ಷ ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷವೂ ಸಾಕಷ್ಟು ಮಳೆ ಹಾನಿ ಸಂಭವಿಸಿದೆ. ಆದರೆ 2019ರ ಭೀಕರ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡಿದ್ದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷದ ಬೆಳೆಹಾನಿಗೆ ಯಾವಾಗ ಪರಿಹಾರ ಸಿಗುತ್ತೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.

2019 ಕೃಷ್ಣಾ ಹಾಗೂ ಭೀಮಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿ ರಾಯಚೂರು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಭತ್ತ, ತೊಗರಿ ಸೇರಿದಂತೆ ನದಿ ಪಾತ್ರದ ಬಹುತೇಕ ಬೆಳೆಗಳು ಜಲಾವೃತವಾಗಿ ಬೆಳೆ ಹಾಳಾಗಿತ್ತು. ಆದರೆ ರೈತರು ಬೆಳೆ ಕಳೆದುಕೊಂಡು ಎರಡು ವರ್ಷಗಳು ಕಳೆದರೂ ಇದುವರೆಗೂ ರೈತರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಬೆಳೆ ಚೆನ್ನಾಗಿ ಬಂದಾಗಲೇ ಪ್ರವಾಹ ಬಂದು ಬೆಳೆಗಳು ಸಂಪೂರ್ಣ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ರಾಯಚೂರು ತಾಲೂಕಿನ ಡೊಂಗರಾಂಪುರ ಗ್ರಾಮ ಒಂದರಲ್ಲೇ ನದಿ ಪಾತ್ರದ 500ಕ್ಕೂ ಅಧಿಕ ಹೆಕ್ಟೇರ್ ನಲ್ಲಿ ಬೆಳೆದ ಭತ್ತ ನೀರು ಪಾಲಾಗಿತ್ತು. ಪ್ರವಾಹಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ಅರ್ಧಕರ್ದ ರೈತರಿಗೆ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಪ್ರವಾಹ ಬಂದು ಎರಡು ವರ್ಷಗಳು ಕಳೆದ್ರೂ ಪರಿಹಾರ ಸಿಗದ ಕಾರಣ, ಇತ್ತ ಬೆಳೆಯೂ ಕಳೆದುಕೊಂಡು, ಪರಿಹಾರವೂ ಕೈ ಸೇರದ್ದಕ್ಕೆ ರೈತರು ಕಂಗಾಲಾಗಿದ್ದಾರೆ.

ಪ್ರತೀ ಬಾರಿಯೂ ಕೃಷ್ಣಾ ನದಿ ಪ್ರವಾಹ ಬಂದಾಗಲೆಲ್ಲಾ ನದಿ ಪಾತ್ರದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಡವಾಗಿ ಬರುವ ಅಧಿಕಾರಿಗಳು ಜಮೀನುಗಳನ್ನು ಸರ್ವೆ ಮಾಡಿ, ಜಿಪಿಎಸ್ ಮಾಡಿಕೊಂಡು ಹೋಗಿದ್ದರು. ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದ್ರೂ ನಿಜವಾದ ಎಷ್ಟೋ ಫಲಾನುಭವಿಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ರೈತರ ಸಂಕಷ್ಟ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಪುನಃ ಸರ್ವೆ ಮಾಡುವುದಾಗಿ ಹೇಳುತ್ತಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತ್ರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪದೇ ಪದೇ ಬದಲಾಗುತ್ತಿದ್ದರೆ ಸಮಸ್ಯೆ ಕೇಳುವವರು ಯಾರು ಎಂದು ಜಿಲ್ಲೆಯ ಜನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ನದಿ ಪಾತ್ರದ ರೈತರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ಮಾಡಿ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಮಾತ್ರ ತಾರತಮ್ಯ ಮಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *