ಭತ್ತದ ಕಣಜ ಗಂಗಾವತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ

Public TV
2 Min Read

ಕೊಪ್ಪಳ: ರಾಜ್ಯದ ಭತ್ತದ ಕಣಜವೆಂದೇ ಹೆಸರಾದ ಗಂಗಾವತಿ ತಾಲೂಕಿನಲ್ಲಿ ಕೃಷಿ ಕಾಲೇಜು ಆರಂಭಿಸುವಂತೆ ರಾಯಚೂರು ಕೃಷಿ ವಿವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಅತಿ ಹೆಚ್ಚು ರೈಸ್ ಮಿಲ್, ಗುಣಮಟ್ಟದ ಅಕ್ಕಿ ಬೆಳೆದು ದೇಶ, ವಿದೇಶಕ್ಕೆ ರಫ್ತು ಮಾಡುವ ಮೂಲಕ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಂಗಾವತಿ ಹೊಂದಿದೆ. ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರ 1956ರಲ್ಲಿಯೇ ಸ್ಥಾಪನೆಯಾಗುವ ಮೂಲಕ ಗಂಗಾವತಿ, ಕಾರಟಗಿ, ಮುನಿರಾಬಾದ್, ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಹೊಸಪೇಟೆ, ಕಂಪ್ಲಿ, ಕುರಗೋಡು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಭಾಗದ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ.

ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಿದರೆ ಈ ಭಾಗದ ರೈತರ ಮತ್ತು ಅವರ ಅವಲಂಬಿತರಿಗೆ ಇನ್ನೂ ಹೆಚ್ಚಿನ ಸಹಾಯ ದೊರೆಯುವ ಆಶಯದೊಂದಿದೆ ಕಾಲೇಜು ಆರಂಭಕ್ಕೆ ಮನವಿ ಮಾಡಲಾಗಿದೆ. ಇಲ್ಲಿ 284 ಎಕರೆ ಪ್ರದೇಶದಲ್ಲಿ ಕೃಷಿ ಸಂಶೋಧನಾ ಕೇಂದ್ರವಿದ್ದು, ಇಲ್ಲಿಯೇ ಕಾಲೇಜು ಆರಂಭಿಸಿದರೆ ಸೂಕ್ತ ಎನ್ನಲಾಗುತ್ತದೆ. ಕಾಲೇಜಿಗೆ 112 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.

ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ಕೃಷಿ ಕಾಲೇಜಿಗೆ 46.50 ಕೋಟಿ ಹಣ ಮಂಜೂರು ಮಾಡಿದ್ದರು. ಅಲ್ಲದೆ ಶಾಸಕ ಪರಣ್ಣ ಮುನವಳ್ಳಿ ಕೂಡ ಕಾಲೇಜು ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರೆವೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಈ ಪ್ರಸ್ತಾವಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರಿಂದ ಕಾಲೇಜು ಸ್ಥಾಪನೆ ಕನಸಾಗಿಯೇ ಉಳಿದಿತ್ತು.

ಈಗ ಮತ್ತೆ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಶೀಘ್ರ ಕಾಲೇಜು ಆರಂಭಿಸಬೇಕು ಎಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಭತ್ತ, ಸಜ್ಜೆ, ರಾಗಿ, ಶೇಂಗಾ, ಮುಸುಕಿನಜೋಳ, ಕಬ್ಬು, ಹತ್ತಿ ಬೆಳೆದು ರೈತರು ಸಾಧನೆ ಮಾಡಿದ್ದಾರೆ. ಹೊಸ ಪ್ರಯೋಗಗಳನ್ನು ಪ್ರಗತಿಪರ ರೈತರು ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಕೃಷಿ ಕ್ಷೇತ್ರ ಬಗ್ಗೆ ಅಪಾರ ದೇಶೀ ಜ್ಞಾನ ಹೊಂದಿರುವ ಇಲ್ಲಿನ ರೈತರಿಗೆ ಕೃಷಿ ಕಾಲೇಜು ಆರಂಭಿಸುವುದರಿಂದ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೆ ಆಧುನಿಕ, ವೈಜ್ಞಾನಿಕ ಕೃಷಿಗೆ ಹೇರಳ ಮಾನವ ಸಂಪನ್ಮೂಲವನ್ನು ತಯಾರಿಸುವ ಹೊಣೆ ಕಾಲೇಜಿನ ಮೂಲಕ ಆಗುತ್ತದೆ ಎಂಬ ಭರವಸೆಯನ್ನು ಇಲ್ಲಿನ ರೈತರು ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *